ಬಸವಣ್ಣನ ಹುಟ್ಟಿನ ಮತ್ತು ಜಾತಿಯ ಬಗ್ಗೆ ಮತ್ತಷ್ಟು. . .

ಹಿರಿಯರ ಹಿರಿಯತನ ಹಿಂದೇನಾಯಿತು? :
ಬಸವಣ್ಣನ ಹುಟ್ಟಿನ ಮತ್ತು ಜಾತಿಯ ಬಗ್ಗೆ ಮತ್ತಷ್ಟು. . .

ಡಾ. ವಿಜಯಕುಮಾರ್ ಎಂ. ಬೋರಟ್ಟಿ
ಇಂಗ್ಲೀಷ್ ಅಧ್ಯಾಪಕರು,
ಮೈಸೂರು ವಿ.ವಿ. ಸಂಜೆ ಕಾಲೇಜ್, ಮೈಸೂರು


“ಜಾತಿವಿಡಿದು ಸೂತಕವನರಸುವೆ
ಜ್ಯೋತಿವಿಡಿದು ಕತ್ತಲೆಯನರಸುವೆ
ಇದೇಕೊ ಮರುಳುಮಾನವಾ? ಜಾತಿಯಲ್ಲಿ ಅಧಿಕನೆಂಬೆ!”
(ಬಸವಣ್ಣ, ೧೯೯೩: ೫೯೫)

ಬಸವಣ್ಣನ ಜಾತಿ ಮತ್ತು ಹುಟ್ಟಿನ ಬಗ್ಗೆ ಆಗಾಗ ಏಳುವ ವಾದ-ವಿವಾದಗಳು ಬರಿಯ ಸಾಹಿತ್ಯಕವಾಗಿರುವುದಲ್ಲದೆ ಅವು ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕ್ರತಿಕ ಮಜಲುಗಳನ್ನು ಸೂಚಿಸುವ ಐತಿಹಾಸಿಕ ಕುರುಹುಗಳಾಗಿವೆ. ಇಲ್ಲಿ ಐತಿಹಾಸಿಕ ಎಂಬ ಪರಿಕಲ್ಪನೆಯ ಬಗ್ಗೆ ವಿಶೇಷ ಒತ್ತನ್ನು ನೀಡಬೇಕು. ಏಕೆಂದರೆ ೨೦ನೇ ಶತಮಾನದಲ್ಲಿ ಬಸವಣ್ಣನ ಜಾತಿಯ ಅಥವಾ ಹುಟ್ಟಿನ ಬಗ್ಗೆ ಉಂಟಾದ ಚರ್ಚೆ, ವಾದ-ವಿವಾದಗಳು ಬಸವಣ್ಣನವರು ಯಾವ ಜಾತಿಗೆ ಸೇರಿದನೆಂಬುದಾಗಿದೆಯೆ ಹೊರತು ಈ ವಾದ-ವಿವಾದಗಳಿಗೂ ತಳಹದಿಯಾಗಿ ಒಂದು ಐತಿಹಾಸಿಕ ಘಟನೆ ಅಥವಾ ಸಂದರ್ಭ ಇದೆಯೆಂಬ ಅಂಶದ ಬಗ್ಗೆ ಇದುವರೆಗು ಯಾರು ಗಮನಹರಿಸಿರುವ ಅಥವಾ ತಲೆಕೆಡಿಸಿಕೊಂಡಿರುವ ಸುಳಿವುಗಳಿಲ್ಲ. ಹೀಗಾಗಿ ಬಸವಣ್ಣನ ಜಾತಿಯ ಚರ್ಚೆ, ವಾದ-ವಿವಾದಗಳಿಗೆ ತನ್ನದೆ ಆದ ಇತಿಹಾಸ ಇದ್ದರು, ಅದರ ಬಗ್ಗೆ ಇರುವ ಜ್ನಾನ ಅಥವಾ ಬೌದ್ಧಿಕ ಚರ್ಚೆಗಳು ಬಹಳ ಸರಳಿಕೃತ ಹಾಗು ಏಕದೃಷ್ಟಿಕೋನವುಳ್ಳ ಹಳದಿ ಕಣ್ಣುಗಳಾಗಿವೆ. ಪ್ರಸ್ತುತ ಲೇಖನವು ಬಸವಣ್ಣನ ಜಾತಿಯನ್ನು ನಿಖರವಾಗಿ ಹುಡುಕುವ ಅಥವಾ ಇರುವ ವಿವಾದಗಳನ್ನು ಸುಲಲಿತವಾಗಿ ಬಗೆಹರಿಸುವ ಪ್ರಯತ್ನವಿರದೆ ಈ ವಿವಾದಗಳಿಗೆ ಹಿನ್ನಲೆಯಾಗಿ ಇರುವ ಕೆಲವು ಐತಿಹಾಸಿಕ ಸಂದರ್ಭಗಳನ್ನು ಪರಿಶೀಲಿಸುವ ಸಣ್ಣ ಪ್ರಯತ್ನ. ಲೇಖನದ ಚರ್ಚೆಯು ವಸಾಹತುಶಾಹಿ ಕಾಲ ಘಟ್ಟಕ್ಕೆ ಮಾತ್ರ ಸೀಮಿತವಾಗಿರುತ್ತದೆ (ವಿಶೇಷವಾಗಿ ೧೮೮೦-೧೯೩೦).

I
‘ಕುಲಜನೆಂಬುದಕ್ಕೆ ಆವುದು ದ್ರಷ್ಟ?:
ಆರಾಧ್ಯನೋ, ಲಿಂಗಾಯತನೋ?

ನನ್ನ ಅರಿವಿನ ಮಟ್ಟಕ್ಕೆ ಹೇಳುವದಾದರೆ ಬಸವಣ್ಣನ ಜಾತಿಯ ಅಥವಾ ಹುಟ್ಟಿನ ಬಗ್ಗೆ ಇರುವ ವಾದ-ವಿವಾದಗಳು ೧೯ನೇ ಶತಮಾನದ ಕೊನೆಯ ಎರಡು ದಶಕಗಳು ಮತ್ತು ೨೦ನೇ ಶತಮಾನದ ಮೊದಲರ್ದದಲ್ಲಿ, ಅಂದರೆ ೧೯೧೦-೨೦ರ ದಶಕಗಳಲ್ಲಿ, ಹೊಸ ರೂಪವನ್ನು ತಾಳಿ, ತಾರಕಕ್ಕೇರಿ ನಿರ್ಣಾಯಕ ಘಟ್ಟವನ್ನು ತಲುಪದೆ ಅಪರಿಹಾರವಾಗಿ ಉಳಿದುಕೊಂಡ ಚಾರಿತ್ರಿಕ ಸಂದರ್ಭಗಳು. ೧೯ನೇ ಶತಮಾನದ ಕೊನೆಯ ಎರಡು ದಶಕಗಳವರೆಗೂ ಬಸವಣ್ಣನ ಜಾತಿಯ ಬಗ್ಗೆ ಕಾವೇರುವಷ್ಟು ವಾದ-ವಿವಾದಗಳಾಗಿರಲಿಲ್ಲ. ಪ್ರಥಮ ಬಾರಿಗೆ ಲಿಂಗಾಯತರ ಬಗ್ಗೆ ಗಂಭೀರವಾಗಿ ಅಧ್ಯಯನವನ್ನು ಮಾಡಿ ತನ್ನ ವಿಚಾರ ಸರಣಿಯನ್ನು ಮಂಡಿಸಿದ ಸಿ.ಪಿ. ಬ್ರೌನ್ನು ಬಸವಣ್ಣನು ಆರಾಧ್ಯನಾಗಿರದೆ ಶೈವ ಬ್ರಾಹ್ಮಣನೆಂದು ಬರೆದಿದ್ದಾನೆ (೧೮೭೧: ೧೪೧ ಮತ್ತು ೧೯೯೮: ೮೨). ಆಂಧ್ರ ಪ್ರದೇಶದಲ್ಲಿನ ಜಂಗಮರ ಬಗ್ಗೆ ಬರೆಯುತ್ತಾ ಬಸವಣ್ಣನ ತಂದೆ ಆರಾಧ್ಯನಾಗಿದ್ದನು ಎಂಬುದನ್ನು ಅಲ್ಲಗಳೆಯುತ್ತಾನೆ. ಇದಕ್ಕಿಂತ ಮೊದಲೆ ಬುಕನಾನ್ ಎಂಬ ಇಂಗ್ಲೀಷ ಅಧಿಕಾರಿಯು ಬಸವಣ್ಣನು ಬ್ರಾಹ್ಮಣನ ಮಗನೆಂದು ದಾಖಲಿಸಿದ್ದಾನೆ (೧೯೮೮: ೨೪೦). ಆದರೆ ಯಾವ ಬ್ರಾಹ್ಮಣ ಎಂಬ ಮಾಹಿತಿ ಇಲ್ಲ. ನಂತರ ಬಂದ ಇತರ ಪಾಶ್ಚಾತ್ಯ ವಿದ್ವಾಂಸರಲ್ಲಿ (ವುರ್ಥ, ಕಿಟೆಲ್, ಎ. ಬಾರ್ಥ್) ಅಥವಾ ಸ್ಥಳೀಯ ವಿದ್ವಾಂಸರಾದ ಆರ್.ಜಿ. ಭಂಡಾರಕರ್, ಪಿ.ಆರ್. ಕರಿಬಸವಶಾಸ್ರಿ, ಇತ್ಯಾದಿಯವರು ಭಾಗಶ: ಬಸವಣ್ಣನನ್ನು ಆರಾಧ್ಯ ಬ್ರಾಹ್ಮಣನೆಂದೊ ಅಥವಾ ಸ್ಮಾರ್ತ ಬ್ರಾಹ್ಮಣನೆಂದೊ ಇಲ್ಲದಿದ್ದರೆ ಶೈವ/ಲಿಂಗಿ ಬ್ರಾಹ್ಮಣನೆಂದು ಭಾವಿಸಿದರು. ಇವರೆಲ್ಲರೂ (ಬುಕನಾನ್ ಮತ್ತು ಬ್ರೌನ್ ಇಬ್ಬರನ್ನು ಬಿಟ್ಟು) ಲಿಂಗಾಯತ ಪುರಾಣಗಳನ್ನು (ಕನ್ನಡ, ತೆಲುಗು ಮತ್ತು ಸಂಸ್ಕ್ರತ ಭಾಷೆಗಳಲ್ಲಿ) ಆಧಾರವಾಗಿಟ್ಟುಕೊಂಡು ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಬುಕನಾನ್ ಮತ್ತು ಬ್ರೌನ್ ಇಬ್ಬರು ಆಧಾರಗಳ ಸಮೇತ ಅನೇಕ ಲಿಂಗಾಯತ ವಿದ್ವಾಂಸರನ್ನು ಸಂದರ್ಶಿಸಿ ಅವರಿಂದ ಮಾಹಿತಿಗಳನ್ನು ಸಂಗ್ರಹಿಸಿದರು. ಹೀಗಾಗಿ ಇವರಿಬ್ಬರಲ್ಲಿ ‘ಕಾರ್ಯಕ್ಷೇತ್ರ’ ಪ್ರಯತ್ನಗಳನ್ನು ಕಾಣಬಹುದು. ಹಾಗಾದರೆ ೧೯ನೇ ಶತಮಾನದ ಕೊನೆಯ ಎರಡು ದಶಕಗಳವರೆಗು ಬಸವಣ್ಣನ ಹುಟ್ಟು ಮತ್ತು ಜಾತಿಯ ಬಗ್ಗೆ ಇಲ್ಲದ ಬಿರುಸಿನ ವಾದ-ವಿವಾದಗಳು ನಂತರದ ದಶಕಗಳಲ್ಲಿ ಹುಟ್ತಿಕೊಂಡದ್ದು ಹೇಗೆ ಮತ್ತು ಏಕೆ? ನಾನು ಭಾವಿಸುವ ಹಾಗೆ ಈ ಪ್ರಶ್ನೆಗಳು ಬಹಳ ಮುಖ್ಯವಾದುವು ಏಕೆಂದರೆ ಅವು ಮಹತ್ತರವಾದ ಐತಿಹಾಸಿಕ ಹಾಗು ಸಾಂಸ್ಕ್ರತಿಕ ಅಂಶಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಮುಂದಿನ ಚರ್ಚೆಯು ಈ ಪ್ರಶ್ನೆಗಳಿಗೆ ಸಮಾಧಾನವನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತದೆ.

ಬಸವಣ್ಣನ ಜಾತಿ ಮತ್ತು ಹುಟ್ಟಿನ ಪ್ರಶ್ನೆಗಳು ಬರಿಯ ತಾರ್ಕಿಕ ಚರ್ಚೆಗೆ ಮಾತ್ರ ಸೀಮಿತವಾಗಿರಲಿಲ್ಲ. ಅವು ಲಿಂಗಾಯತ ಸಮಾಜದಲ್ಲಿ ಉಂಟಾದ ಸಾಮಾಜಿಕ, ಸಾಹಿತ್ಯಕ, ರಾಜಕೀಯ ಮತ್ತು ಆರ್ಥಿಕ ಸ್ಠಿತ್ಯಂತರಗಳನ್ನು ಪ್ರಭಾವಿಸುವಷ್ಟು ಅಥವಾ ಪ್ರಭಾವ ಹೊಂದುವಷ್ಟು ಪರಿಣಾಮಕಾರಿಯಾದ ವಿಚಾರಗಳನ್ನು ಒಳಗೊಂಡಿದ್ದವು. ಒಂದು ಕಡೆ ಲಿಂಗಾಯತರ ಆಧುನಿಕ ಮತ್ತು ಪ್ರಗತಿಪರ ಅಸ್ಮಿತೆಯ ಜೊತೆಗೆ ತಳಕು ಹಾಕಿಕೊಂಡಿರುವಂತೆ, ಮತ್ತೊಂದು ಕಡೆ ಸಂಪ್ರದಾಯವಾದಿಗಳನ್ನು ಕೆರಳಿಸುವ ಹತ್ಯಾರುಗಳಾಗಿ ಈ ಪ್ರಶ್ನೆಗಳು ರೂಪುಗೊಂಡಿದ್ದವು. ಇವುಗಳ ಬಗ್ಗೆ ಚರ್ಚೆಯನ್ನು ಮುಂದುವರೆಸುವ ಮೊದಲು ಬಸವಣ್ಣನ ಜಾತಿ ಮತ್ತು ಹುಟ್ಟಿನ ಬಗ್ಗೆ ೧೯೨೨ರ ಸುಮಾರಿಗೆ ಉಂಟಾದ ಒಂದು ಮುಖ್ಯವಾದ ಚಾರಿತ್ರಿಕ ಸಂದರ್ಭವನ್ನು ಅವಲೋಕಿಸಬೇಕಾಗುತ್ತದೆ. ಈ ಸಂದರ್ಭವು ಲಿಂಗಾಯತ ವಿದ್ವಾಂಸರಲ್ಲಿ ಪ್ರಮುಖರಾಗಿದ್ದ ಸಿದ್ಧರಾಮಪ್ಪ ಪಾವಟೆಯವರ ವಿದ್ವತ್ ವಿಚಾರಕ್ಕೆ ಸಂಭಂದಿಸಿದ್ದು. ೧೯೨೨ರಲ್ಲಿ ಪ್ರಕಟಗೊಂಡ ಬಸವ ಬಾನು ಎಂಬ ಹೊತ್ತಿಗೆಯಲ್ಲಿ ಪಾವಟೆಯವರು ಆವೇಶಭರಿತವಾಗಿ ಬಸವಣ್ಣನ ಬಗ್ಗೆ ಹೀಗೆ ಬರೆಯುತ್ತಾರೆ,

ಇಂತು ಸಕಲರಿಗೂ ವಂದ್ಯನಾದ ಬಸವನನ್ನು ಕುರಿತು ಆರಾಧ್ಯನೋ ಸ್ಮಾರ್ತನೋ ಎಂದು ವಾದಿಗಳು ಕೇಳುವುದುಂಟು. ಬಸವನು ಸ್ಮಾರ್ತನಲ್ಲ, ಆರಾಧ್ಯನಲ್ಲ; ಅನಾದಿ ವೀರಶೈವನು-ಲಿಂಗವಂತನು-ಸದ್ಗುರುಜಾತನು(೧೯೨೨:೨೩).

ಮತ್ತಷ್ಟು ಮುಂದುವರೆಯುತ್ತಾ ಪಾವಟೆಯವರು ಖಡಾ ಖಂಡಿತವಾಗಿ ಬಸವನು ಲಿಂಗಾಯತನು, ಆರಾಧ್ಯನಲ್ಲ ಎಂದು ಪುನರುಚ್ಚಿಸುತ್ತಾರೆ (೧೯೨೨:೨೪). ಸ್ವತ: ಸಂಸ್ಕ್ರತ ಪಂಡಿತರಾಗಿದ್ದ ಪಾವಟೆಯವರು ತಮ್ಮ ವಾದಗಳನ್ನು ಮಂಡಿಸಲು ವೇದ, ಪುರಾಣೇತಿಹಾಸ ಮತ್ತು ಸಂಸ್ಕ್ರತ ಕೃತಿಗಳ ಸಹಾಯವನ್ನು ಧಾರಾಳವಾಗಿ ಬಳಸಿಕೊಂಡಿದ್ದಾರೆ. ಹೀಗೆ ಆವೇಶಭರಿತವಾಗಿ ತಮ್ಮ ನಂಬಿಕೆಗಳನ್ನು ಮತ್ತು ತರ್ಕವನ್ನು ಪಾವಟೆಯವರು ಜನರ ಮುಂದೆ ಇಡಲು ಇದ್ದ ಚಾರಿತ್ರಿಕ ಒತ್ತಡಗಳು ಮತ್ತು ತುರ್ತುಗಳು ಯಾವುವು?

ಇಡೀ ಹೊತ್ತಿಗೆಯಲ್ಲಿ ಪಾವಟೆಯವರ ಚರ್ಚೆಯು ಲಿಂಗಾಯತ ಧರ್ಮ ಮತ್ತು ಶಿವ ಶರಣರ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುತ್ತಾ, ಪಂಚಾಚಾರ್ಯರ ಹಿಂಬಾಲಕರನ್ನು ತೆಗಳುತ್ತಾ ಸಾಗುತ್ತದೆ. ಬಸವಣ್ಣನ ಜಾತಿಯ ಬಗ್ಗೆ ಹೀಗೆ ಆವೇಶದಿಂದ ವಾದಿಸಲು ಅವರಿಗಿದ್ದ ಕಾರಣ ಒಂದು ವರ್ಷದ ಹಿಂದೆ ಪ್ರಕಟಗೊಂಡ ಬಸವಾದಿನಿಜತತ್ವದರ್ಪಣ (೧೯೨೧) ಎಂಬ ವಿಚಾರ ಪ್ರಚೋದಕ ಕೃತಿ. ಪಾವಟೆಯವರ ಬಸವ ಬಾನು ಈ ಕೃತಿಗೆ ಪ್ರತಿಕ್ರಿಯೆಯಾಗಿ ಬರೆಯಲ್ಪಟ್ಟಿದ್ದು. ಪಂಚಾಚಾರ್ಯ ಪಂಥದ ಪ್ರಮುಖರಾಗಿದ್ದ ಕಾಶಿನಾಥ ಶಾಸ್ತ್ರಿಯ ಆಪ್ತ ಶಾಂತಪ್ಪ ವೀರಭದ್ರಪ್ಪ ಕುಬುಸದವರಿಂದ ರಚಿಸಲ್ಪಟ್ಟ ಬಸವಾದಿನಿಜತತ್ವದರ್ಪಣ ಕ್ರತಿಯು ಪಾವಟೆ ಮತ್ತು ಲಿಂಗಾಯತ ವಿದ್ವಾಂಸರನ್ನು ಕೇಳರಿಯದಷ್ಟು ಪ್ರಚೊದಿಸಿತ್ತು. ಹಾಗಾದರೆ ಈ ಕೃತಿಯಲ್ಲಿ ಪ್ರಚೊದನಕಾರಿಯಾದ ವಿಷಯಗಳೇನಿದ್ದವು? ಈ ಕ್ರತಿಯ ಮೂಲೋದ್ದೇಶವೆನಿದ್ದಿತು?

ಬಸವಾದಿನಿಜತತ್ವದರ್ಪಣದಲ್ಲಿ ಶಿವ ಶರಣರ ಬಗ್ಗೆ ಇನ್ನೂರು ಪ್ರಶ್ನೆಗಳು, ಸಂದೇಹಗಳು ಮತ್ತು ಆಪಾದನೆಗಳಿವೆ. ಇವೆಲ್ಲವೂ ೧೨ನೇ ಶತಮಾನದ ‘ಕ್ರಾಂತಿಕಾರ’ ಚಳುವಳಿ ಮತ್ತು ಅವರ ಧಾರ್ಮಿಕ ಆಚಾರ-ವಿಚಾರಗಳ ಅ/ಪ್ರಸ್ತುತತೆಯನ್ನು ಕುರಿತದ್ದಾಗಿವೆ. ಈ ಕೃತಿಗಾಗಿ ಕುಬುಸದರವರು ಮಾನವ ಶಾಸ್ತ್ರ, ಸಾಹಿತ್ಯ, ಇತಿಹಾಸ, ಪುರಾಣ, ಇತ್ಯಾದಿಗಳನ್ನು ವಾದ-ಪ್ರತಿಪಾದನೆಗಾಗಿ ಉಪಯೋಗಿಸಿಕೊಂಡಿದ್ದಾರೆ. ಲಿಂಗಾಯತರ ಬಗ್ಗೆ ಫ್ಲೀಟ್ ಮತ್ತು ಗ್ಯಾರೆಟರಿಂದ ರಚಿಸಲ್ಪಟ್ಟ ಕೃತಿಗಳ ಉಲ್ಲೇಖಗಳನ್ನು ಇಲ್ಲಿ ಕಾಣಬಹುದು. ಸಂಸ್ಕ್ರತ ಭಾಷೆಯಲ್ಲಿರುವ ಬಸವ ಪುರಾಣ, ಪ್ರಭುಲಿಂಗಲೀಲೆ, ಕಾಡಸಿದ್ಧೇಶ್ವರ ವಚನ, ಸಿಂಗಿರಾಜ ಪುರಾಣ ಮತ್ತು ಚೆನ್ನಬಸವಪುರಾಣಗಳನ್ನು ಬಳಸಿಕೊಂಡು ಶಿವ ಶರಣರ ಬಗ್ಗೆ ಈ ಕ್ರೃತಿಗಳಲ್ಲಿರುವ ವೈರುಧ್ಯ ಮತ್ತು ವಿರೋಧಾಭಾಸಗಳನ್ನು ಎತ್ತಿ ತೋರಿಸಲಾಗಿದೆ. ವ್ಶೆಜ್ನಾನಿಕ ಇತಿಹಾಸ ಮತ್ತು ಸಾಂಪ್ರದಾಯಿಕ ಜ್ನಾನ ಪರಂಪರೆಗಳೆರಡನ್ನು ಉಪಯೋಗಿಸಿಕೊಂಡು ಪಾವಟೆಯವರನ್ನು ತಾರ್ಕಿಕ ಇಕ್ಕಟಿಗೆ ಸಿಕ್ಕಿಸುವ ಜಾಣ ಪ್ರಯತ್ನವಿದು. ಈ ಕೃತಿಯಲ್ಲಿ ಹನ್ನೆರಡು, ಹದಿಮೂರು ಮತ್ತು ಹದಿನಾಲ್ಕನೆ ಪ್ರಶ್ನೆಗಳು ಬಸವಣ್ಣನ ಜಾತಿಯ ಬಗ್ಗೆ ಇದ್ದು ಅವುಗಳನ್ನು ಕ್ರಮವಾಗಿ ಹೀಗೆ ಪಟ್ಟಿ ಮಾಡಬಹುದು:

ಬಸವನು ಆದಿಯಲ್ಲಿ ಯಾವ ಮತದವನು?

ಇವನ [ಬಸವಣ್ಣನ] ವಿಷಯದಲ್ಲಿ ಕೆಲವು ಗ್ರಂಥಗಳು ಸ್ಮಾರ್ತನೆಂತಲೂ, ಕೆಲವು ಗ್ರಂಥಗಳು ಆರಾಧ್ಯ (ವೀರಶೈವ) ನೆಂತಲೂ ಪ್ರತಿಪಾದಿಸುವವು. ಇವುಗಳಲ್ಲಿ ನಿಜವಾವುದು?

ಸ್ಮಾರ್ತನೆಂದರೆ ಲಿಂಗಧಾರಣ ವಿಷಯದಲ್ಲಿ ತಂದೆಮಕ್ಕಳಿಗೆ ವಾದವಿವಾದವು ಉತ್ಪನ್ನವಾಗುತ್ತಿದ್ದಿಲ್ಲವಷ್ಟೆ? ಆರಾಧ್ಯ (ವೀರಶೈವ)ನೆಂದರೆ ಇವನ ತಾಯಿಯು ವೀರಶೈವ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ ಸ್ಥಾವರ ನಂದೀಶ್ವರ ವ್ರತವನ್ನು ಹೇಗೆ ಮಾಡಿದಳು? (೧೯೩೨: ೮).

ಈ ಮೇಲಿನ ಪ್ರಶ್ನೆಗಳು ಬಸವಣ್ಣನ ಮೂಲವನ್ನು ಪ್ರಶ್ನಿಸುವ ಮತ್ತು ಸಂದೇಹಿಸುವ ಧೈರ್ಯವನ್ನು ಪ್ರದರ್ಶಿಸಿದರೂ, ಆತನನ್ನು ಸಂಪೂರ್ಣವಾಗಿ ತಿರಸ್ಕರಿಸುವ ಅಥವಾ ಚಾರಿತ್ರಿಕ ಸ್ಮೃತಿ ಪಟಲದಿಂದ ಅಳಿಸಿ ಹಾಕುವ ಪ್ರಯತ್ನಗಳಾಗಿರಲಿಲ್ಲ. ಭಾಗಶ: ಕುಬುಸದಂತವರಿಗೆ ಬಸವಣ್ಣನು ಶೈವ ಬ್ರಾಹ್ಮಣ ಕುಲಕ್ಕೆ ಸೇರಿದವನು ಎಂಬ ಅಚಲವಾದ ನಂಬಿಕೆ ಇತ್ತು. ಹೀಗೆ ಬಸವಣ್ಣನು ಶೈವ ಬ್ರಾಹ್ಮಣದಿಂದ ಲಿಂಗಾಯತನಾಗಿ ಪರಿವರ್ತನೆಯಾಗಿದ್ದು ಯಾವಾಗ ಮತ್ತು ಅದಕ್ಕಿರುವ ಚಾರಿತ್ರಿಕ ಕಾರಣಗಳೇನು? ಬಸವಣ್ಣನು ಶೈವ ಬ್ರಾಹ್ಮಣ ಎಂದು ವಾದಿಸುವದಕ್ಕೂ ಸಹ ಬಹಳ ಮುಖ್ಯವಾದ ಚಾರಿತ್ರಿಕ, ಸಾಮಾಜಿಕ ಮತ್ತು ಧಾರ್ಮಿಕ ಕಾರಣಗಳಿದ್ದವು. ಮೊದಲು ಈ ಕಾರಣಗಳನ್ನು ಪರೀಕ್ಷಿಸೋಣ. ನಂತರ ೨೦ರ ದಶಕದಲ್ಲಿ ಕುಬುಸದರಂತವರು ಬಸವಣ್ಣನ ಬಗ್ಗೆ ಏಕೆ ಸಂದೇಹಿಗಳಾದರು ಎಂಬುದನ್ನು ಚರ್ಚಿಸಬಹುದು.

II
‘ಆತನ ಕುಲದವರೆಲ್ಲರೂ ಮುಖವ ನೋಡಲೊಲ್ಲದೈದಾರೆ’:
ಶೈವ ಬ್ರಾಹ್ಮಣನಾಗಿ ಬಸವಣ್ಣ

೧೮೮೦ ರ ಸುಮಾರಿನಲ್ಲಿ ಅನೇಕ ಲಿಂಗಾಯತ ವಿದ್ವಾಂಸರು ಬಸವಣ್ಣನ ‘ಕ್ರಾಂತಿಕಾರಕ’ ವಿಚಾರಗಳನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಬ್ರೌನ್ ಮತ್ತು ಇತರ ಪೌರಾತ್ಯ ವಿದ್ವಾಂಸರ ವಾದಗಳನ್ನು ಅವು ಇದ್ದಂತೆ ಒಪ್ಪಿಕೊಳ್ಳಲು ಅವರು ಸಿದ್ಧರಿರಲಿಲ. ಬಸವಣ್ಣನು ಬ್ರಾಹ್ಮಣ ಮತ್ತು ಜಾತಿ ವಿರೋಧಿ ಎಂಬುದನ್ನು ಸ್ವೀಕರಿಸಲು ಕರಿಬಸವಶಾಸ್ತ್ರಿಯಂತ ಲಿಂಗಾಯತ ವಿದ್ವಾಂಸರು ಎಳ್ಳಷ್ಟೂ ಸಿದ್ದರಿರಲಿಲ್ಲ. ಇದರ ಜೊತೆಗೆ ಬಸವಣ್ಣನು ಸಮಾನತೆಯ ಹರಿಕಾರ, ಸಮಾಜ್ಜೊದ್ದಾರಕ, ಇತ್ಯಾದಿ ಗ್ರಹಿಕೆಗಳು ಲಿಂಗಾಯತ ಜನಸಾಮಾನ್ಯರಲ್ಲಿ ಅಸ್ಪಷ್ಟವಾಗಿತ್ತು. ಇಷ್ಟಾಗಿಯೂ ಬಸವಣ್ಣನು ಶಿವನ ಅವತಾರ ಎಂಬುದರಲ್ಲಿ ಅವರಿಗೆ ಸಂಶಯವಿರಲ್ಲಿ. ಅವನನ್ನು ವೀರಶೈವ ಮತದ ಉದ್ದಾರಕ ಎಂದು ನಂಬಿದ್ದರು. ಬಸವಣ್ಣನ ಬಗ್ಗೆ ಯಾರಾದರು ತಪ್ಪು ಮಾತಾಡಿದರೆ ಅವರನ್ನು ಖಂಡಿಸದೇ ಬಿಡುತ್ತಿರಲಿಲ್ಲ. ಆದರೆ ಇದು ಬಸವಣ್ಣನ ವಿಚಾರಗಳಿಗಾಗಲಿ ಅಥವಾ ಆತನ ಪೌರೋಹಿತ್ಯ-ವಿರೋಧಿ ನಿಲುವುಗಳ ಸಮರ್ಥನೆಯಾಗಿರಲಿಲ್ಲ. ಉದಾಹರಣೆಗೆ ಹಿಂದು ಚರಿತ್ರೆ ದರ್ಪಣದಲ್ಲಿ (೧೮೮೨ ರಲ್ಲಿ ಇಂಗ್ಲೀಷಿನಿಂದ ಕನ್ನಡಕ್ಕೆ ಭಾಷಾಂತರವಾದದ್ದು) ಬಸವನಣ್ಣನನ್ನು ಕಪಟಿಯೆಂದು ಜರಿಯಲಾಯಿತು. ಬಿಜ್ಜಳನ ವಿರುದ್ಧ ಸಂಚು ಹೂಡಿದ ಪಾತಕಿಯೆಂದು ಅವನನ್ನು ಮೂದಲಿಸಲಾಗಿತ್ತು. ಅದರಲ್ಲಿ ಮತ್ತೊಂದು ಕೆಣಕುವ ಅಂಶವೇನೆಂದರೆ ಬಸವಣ್ಣನನ್ನು ಸ್ಮಾರ್ತ ಆರಾಧ್ಯ ಬ್ರಾಹ್ಮಣನೆಂದು (೧೮೮೪: ೫೩) ಚಿತ್ರಿಸಲಾಗಿತ್ತು. ಇದಕ್ಕೆ ವಿರುದ್ಧವಾಗಿ ಕರಿಬಸವಶಾಸ್ತ್ರಿಯವರು ಬಸವಣ್ಣನು ಸ್ಮಾರ್ತ ಆರಾಧ್ಯ ಬ್ರಾಹ್ಮಣನಾಗಿರುವದಕ್ಕೆ ಸಾಧ್ಯವೇ ಇಲ್ಲವೆಂದು ವಾದಿಸುತ್ತಾರೆ,

ಇನ್ನ್ನೊಂದು ಕಡೆಯಲ್ಲಿ ಬಸಪ್ಪನು, ಸ್ಮಾರ್ತ ಆರಾಧ್ಯ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿ ಲಿಂಗಾಯತ ಮತವನ್ನು ಸ್ಥಾಪಿಸಿದನೆಂದು ಹೇಳಿದ್ದಾರೆ. ಸ್ಮಾರ್ತ ಬ್ರಾಹ್ಮಣನು ಜೈನಕ್ಷತ್ರಿಯ ಜಾತಿಯಲ್ಲಿ ವಿವಾಹ ಸಂಬಂಧವಂ ಮಾಡುವ ಪದ್ದತಿಯು ಜಗದಾದಿಯಿಂದ ಈ ವರೆಗೂ ಇಲ್ಲ (೧೮೮೪: ೫೩)

ದರ್ಪಣದಲ್ಲಿ ಬಸವಣ್ಣನು ತನ್ನ ಹಿತಾಸಕ್ತಿಗಳನ್ನು ಕಾಪಾಡಲು ಬಿಜ್ಜಳನ ಜೊತೆಗೆ ತನ್ನ ಅಕ್ಕನ ವಿವಾಹವನ್ನು ಮಾಡಿಸಿದನೆಂದು ದಾಖಲಿಸಿರುವದಕ್ಕೆ ಕರಿಬಸವಶಾಸ್ತ್ರಿಯವರು ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ. ಕೃತಿಕಾರರ ಪಕ್ಷಪಾತವನ್ನು ಮತ್ತು ಅಪ್ರಮಾಣಿಕತೆಯನ್ನು ಜರಿಯುತ್ತಾ ಬಸವuನು ಅಲಿಂಗಿ ಬ್ರಾಹ್ಮಣ ಕುಲದಲ್ಲಿ ಜನಿಸಿ ಸಂಗಮನಾಥನಿಂದ ವೀರಶೈವ ದೀಕ್ಷೆಯನ್ನು ಪಡೆದನೆಂದು ಪ್ರತಿ-ವಾದಿಸಿದ್ದಾರೆ. ಮೈಸೂರ್ ಸ್ಟಾರ್ ಕರೆಸ್ಪಾಂಡೆನ್ಸ್ (೧೮೮೪) ನಲ್ಲಿ ಈ ಪುಸ್ತಕದ ವಿಮರ್ಶೆ ಮಾಡುತ್ತಾ ಕರಿಬಸವಶಾಸ್ತ್ರಿಯವರು ಬಸವಣ್ಣನ ವಿರುದ್ಧವಿರುವ ವಿವರಗಳನ್ನು ತೀಕ್ಷ್ಣವಾಗಿ ಖಂಡಿಸಿದರು. ಈ ತರಹದ ಅಪಪ್ರಚಾರಕ್ಕೆ ಲಿಂಗಾಯತೇತರ ಕೃತಿಗಳೇ ಕಾರಣವೆಂದು ತೆಗಳಿದ್ದಾರೆ. ಹಿಂದೂ ಚರಿತ್ರೆ ದರ್ಪಣವು ಜೈನ ಪಂಡಿತನಿಂದ ರಚಿಸಲ್ಪಟ್ಟು, ವುರ್ತನಿಂದ ಸಂಕಲಿಸಲ್ಪಟ್ಟ ಪ್ರಕಾವ್ಯ ಮಾಲಿಕೆ ಎಂಬ ಕೃತಿಯ ಮೇಲೆ ಆಧಾರವಾದಿದುದರಿಂದ, ಅದು ಏಕಮುಖವಾದಿಯೆಂದು ತಿರಸ್ಕರಿಲಾಯಿತು. ಕರಿಬಸವಶಾಸ್ತ್ರಿಯವರು ಇಷ್ಟೊಂದು ಉದ್ವೇಗ ಮತ್ತು ಆತಂಕಗೊಳ್ಳಲು ಇದ್ದ ಕಾರಣವೇನೆಂದರೆ ಬಸವಣ್ಣನು ಬ್ರಾಹ್ಮಣ-ವಿರೋಧಿಯೆಂದು ಸಾಬಿತಾದರೆ ಲಿಂಗಾಯತರು ತಮ್ಮನ್ನು ಬ್ರಾಹ್ಮಣರೆಂದು ಅಥವಾ ಬ್ರಾಹ್ಮಣರಂತೆ ತಾವೂಗಳು ಸಹ ಶ್ರೆಷ್ಟರು ಎಂದು ಸಾಧಿಸಲು ಸಾಧ್ಯವಿಲ್ಲವೆಂದು ಬ್ರಾಹ್ಮಣರು ವಾದಿಸಬಹುದಾದ ಸಾಧ್ಯತೆ. ಬಸವಣ್ಣನು ಕೆಳ ವರ್ಗದವರ ಉದ್ದಾರಕನೆಂಬುದು ಲಿಂಗಾಯತರ ಬ್ರಾಹ್ಮಣತ್ವದ ಸಮರ್ಥನೆಗೆ ವ್ಯತಿರಿಕ್ತವಾಗಿತ್ತು. ಆದ್ದರಿಂದ ಬಸವಣ್ಣನ ಹಿರಿಮೆ೦iiನ್ನು ಸ್ವೀಕರಿಸಿದರೂ, ಅವನು ಬ್ರಾಹ್ಮಣ್ಯ ಅಥವಾ ಬ್ರಾಹ್ಮಣ ವಿರೋಧಿ ಎಂದು ಒಪ್ಪಿಕೊಳ್ಳಲು ಕರಿಬಸವಶಾಸ್ತ್ರಿಯಂತವರಿಗೆ ಕಷ್ಟವಾಯಿತು. ಬಸವಣ್ಣನ ‘ಕ್ರಾಂತಿಕಾರಕ’ ವಿಚಾರಗಳನ್ನು ಬದಿಗಿರಿಸಿ ಲಿಂಗಾಯತರ ಬ್ರಾಹ್ಮಣ್ಯದ ಸಾಮರ್ಥ್ಯವನ್ನು ಪ್ರದರ್ಶಿಸುವ ಹೊಣೆಯು ಈಗ ಅವರ ಮೇಲೆ ಇತ್ತು. ಹೀಗಾಗಿ ಬಸವಣ್ಣನನ್ನು ಸ್ಮಾರ್ತ ಬ್ರಾಹ್ಮಣನನ್ನಾಗಿ ಒಪ್ಪಿಕೊಳ್ಳದೆ, ಅವರು ಶೈವ, ಅಪ್ರಾಕೃತ ಬ್ರಾಹ್ಮಣರೆಂದು ಪದೆ, ಪದೆ ವಾದಿಸುತ್ತಿದ್ದರು. ಇದಕ್ಕೆ ಪೂರಕವಾಗಿ ೧೯೦೧ರ ಮೈಸೂರ್ ಸೀಮೆಯ ಸೆನ್ಸ್ಸ್ ರಿಪೊರ್ಟ ಸಹ ಬಸವಣ್ಣನು “ಬೆಲ್ಗಾಮಿಗೆ ಸೇರಿದ ಬಗವಾಡಿಯ ನಿವಾಸಿಯಾದ ಒಬ್ಬ ಆರಾಧ್ಯ ಬ್ರಾಹ್ಮಣನ ಮಗನು” ಎಂದು ದಾಖಲಿಸಲ್ಪಟ್ಟಿದೆ. ಕರಿಬಸವಶಾಸ್ತ್ರಿಯವರ ವಾದಗಳನ್ನು ಆಗಿನ ಮತ್ತೊಬ್ಬ ಲಿಂಗಾಯತ ನಾಯಕರಾದ ಯಜಮಾನ್ ವೀರಸಂಗಪ್ಪನವರು ಪುಷ್ಟಿಕರಿಸಿದ ಉದಾಹರಣೆಗಳು ಸಾಕಷ್ಟಿವೆ.

ಲಿಂಗಾಯತರ ಧಾರ್ಮಿಕ ಮತ್ತು ಸಾಮಾಜಿಕ ಸನ್ನಿವೇಶಗಳು ಮುಂದಿನ ದಶಕಗಳಲ್ಲಿ ಮತ್ತಷ್ಟು ಬದಲಾವಣೆಗೊಳಗಾದವು. ೨೦ನೇ ಶತಮಾನದ ಎರಡನೆ ದಶಕದಲ್ಲಿ ಮೊದಲ್ಗೊಂಡು ಉಂಟಾದ ಸಾಮಾಜಿಕ ಅರಿವು, ತಿಳಿವಳಿಕೆ, ಸಮಾಜ ಸುಧಾರಣೆ ಮತ್ತು ಹೊಸ ಧಾರ್ಮಿಕ ವಿಚಾರಗಳು ಪಂಚಾಚಾರ್ಯ ಮತ್ತು ಕೆಲವು ವಿರಕ್ತ ನಂಬಿಕೆದಾರರಿಗೆ ಗಾಬರಿ ಮತ್ತು ಆತಂಕವನ್ನುಂಟು ಮಾಡಿದವು. ಇದೇ ಸಮಯದಲ್ಲಿ ಕರಿಬಸವಶಾಸ್ತ್ರಿಯಂತವರ ವಿಚಾರಗಳು ಹೊಸ ಪೀಳಿಗೆಯ ಲಿಂಗಾಯತ ವಿದ್ವಾಂಸರಿಗೆ ಸಂಪ್ರದಾಯ/ಹಿಮ್ಮುಖವಾಗಿ ಗೋಚರಿಸಿದವು. ತಲೆತಲಾಂತರದಿಂದ ನಡೆದುಕೊಂಡು ಬಂದ ಆಚಾರ-ವಿಚಾರಗಳಿಗೆ ವ್ಯತಿರಿಕ್ತವಾಗಿ ಹೊಸ ಪೀಳಿಗೆಯ ಲಿಂಗಾಯತರಿಂದ ಮತ್ತು ಶಿವ ಶರಣರ ಬಗ್ಗೆ ಉಂಟಾದ ನವೀನ ವಿಚಾರದ ಅಲೆ ಸಂಪ್ರದಾಯವಾದಿಗಳಿಗೆ ಸವಾಲನ್ನು ಎಸೆಯಿತು. ಈ ಹೊಸ ಅಲೆಯು ಲಿಂಗಾಯತರ ಹೊಸ ಧಾರ್ಮಿಕ ಮತ್ತು ಸಾಮಾಜಿಕ ಇತಿಹಾಸವನ್ನು ಆರಂಭಿಸಲು ನಾಂದಿಯಾಯಿತು. ಇದನ್ನು ಮತ್ತಷ್ಟು ಪರಿಕ್ಷಿಸೋಣ.

III
‘ಘನತರ ಚಿತ್ರದ ರೂಹು ಬರೆಯಬಹುದಲ್ಲದೆ. . .’:
ಹೊಸ ಅಲೆಗಳ ಸುತ್ತ ಲಿಂಗಾಯತರು ಮತ್ತು ಬ್ರಾಹ್ಮಣ/ಲಿಂಗಾಯತನಾಗಿ ಬಸವಣ್ಣ

೨೦ನೇ ಶತಮಾನದ ಎರಡನೇ ದಶಕದಲ್ಲಿ ಲಿಂಗಾಯತರು ಹೊಸ ಬದಲಾವಣೆಗಳಿಗೆ ತಮ್ಮನ್ನು ಒಡ್ದಿಕೊಳ್ಳುವ ಮತ್ತು ಬದಲಾಯಿಸಿಕೊಳ್ಳುವ ತುರ್ತು ಪರಿಸ್ಥಿತಿಗಳುಂಟಾದವು. ಲಿಂಗಾಯತ ತತ್ವ ಮತ್ತು ಸಂಸ್ಕ್ರತಿಯ ಬಗ್ಗೆ ಮತ್ತೊಮ್ಮೆ ಮರು-ಚಿಂತನೆಗೊಳ್ಳುವಂತೆ ಲಿಂಗಾಯತರನ್ನು ಪ್ರೇರೇಪಿಸುವಲ್ಲಿ ಮತ್ತು ಪ್ರಭಾವಿಸುವಲ್ಲಿ ಸಮಾಜದಲ್ಲುಂಟಾಗುತ್ತಿದ್ದ ಬದಲಾವಣೆಗಳು ನೇರವಾಗಿ ಅಥವಾ ಪರೋಕ್ಷವಾಗಿ ಕಾರಣೀಭೂತವಾದವು. ಹೀಗಾಗಿ ಹೊಸ ಸನ್ನಿವೇಶಗಳಿಗೆ ಮತ್ತು ಹೊಸ ಸಂದರ್ಭಗಳಿಗೆ ಅನುಗುಣವಾಗಿ ಲಿಂಗಾಯತ ಧರ್ಮವನ್ನು ರೂಪಿಸಿಕೊಳ್ಳುವ ಆತುರತೆಯನ್ನು ಈ ಸಮಯದಲ್ಲಿ ಕಾಣಬಹುದು. ಶುಭೋದಯ ವಿವಾದವು ಆಗುತ್ತಿದ್ದ ಬದಲಾವಣೆಗೆ ಒಂದು ಸಣ್ಣ ಉದಾಹರಣೆ ಮತ್ತು ಪ್ರಚೋದಕ ಘಟನೆ. ೧೯೧೯ ರಲ್ಲಿ ಉಂಟಾದ ಈ ವಿವಾದವು (ಬಸವ-ಅಲ್ಲಮರನ್ನು ಶುಭೋದಯ ಪತ್ರಿಕೆಯಲ್ಲಿ ವ್ಯತಿರಿಕ್ತವಾಗಿ ಚಿತ್ರಿಸಿದಕ್ಕಾಗಿ) ಹೊಸ ಪೀಳಿಗೆಯ ಲಿಂಗಾಯತರಲ್ಲಿ ಸ್ವಾಭಿಮಾನವನ್ನು ಕೆರಳಿಸಿ, ಹೊಸ ಚಾರಿತ್ರಿಕ ಅಧ್ಯಾಯವನ್ನು ಬರೆಯುವಂತೆ ಪ್ರಚೋದಿಸಿತು.

ಮೈಸೂರು ಮತ್ತು ಬಾಂಬೆ ಪ್ರೆಸಿಡೆನ್ಸಿಗಳಲ್ಲಿ ಶಿಕ್ಷಣ ಮತ್ತು ಸರ್ಕಾರಿ ಹುದ್ದೆಗಳಿಗಾಗಿ ಬಿರುಸಿನಿಂದ ನಡೆಯುತ್ತಿದ್ದ ಹಿಂದುಳಿದ ಬ್ರಾಹ್ಮಣೇತರರ ಮೀಸಲಾತಿ ಚಳುವಳಿ, ತಮಿಳುನಾಡಿನ ಸ್ವ-ಪ್ರತಿಷ್ಟೆ ಚಳುವಳಿ (self-respect movement), ಕೇರಳದ ಈಳವ ಆಂದೋಲನ, ತಿಲಕ್ ಮತ್ತು ಆನಿ ಬೆಸಂಟರ ಮುಂಖಡತ್ವದಲ್ಲಿ ನಡೆಯುತ್ತಿದ್ದ ಹೊಂ-ರೂಲ್ ಚಳುವಳಿ, ನಂತರ ಗಾಂಧೀಯ ನಾಯಕತ್ವದಲ್ಲಿ ಉಂಟಾದ ರಾಷ್ಟೀಯ ಚಳುವಳಿ, ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ, ರಷ್ಯಾದ ಕ್ರ್ರಾಂತಿ, ಮೊದಲನೆ ಮಹಾಯುದ್ಧ, ಮಾರ್ಕ್ಸಿಸ್ಟ್ ವಿಚಾರಗಳು, ರಷ್ಯಾ-ಜಪಾನರ ಪ್ರಗತಿ, ಮುಂತಾದವುಗಳು ಲಿಂಗಾಯತರಲ್ಲಿ ಹೊಸ ಅಲೆಯನ್ನುಂಟು ಮಾಡಿತು. ಮೈಸೂರ್ ಸ್ಟಾರ್ ಪತ್ರಿಕೆಯಲ್ಲಿನ ಲೇಖನಗಳು ಈ ವಿಷಯಗಳ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ನೀಡುತ್ತವೆ. ಈ ಲೇಖನಗಳಲ್ಲಿ ಪ್ರಮುಖವಾಗಿ ಎದ್ದು ಕಾಣುವುದು ಲಿಂಗಾಯತರ ಸ್ಥಿತಿ-ಗತಿಯ ಗ್ಗೆ ಮತ್ತು ಜಾಗತಿಕವಾಗಿ ತಾವು ಯಾವ ಸ್ಥಾನ-ಮಾನಗಳನ್ನು ಹೊಂದಿದ್ದೇವೆ ಎಂಬ ಸ್ವ-ವಿಮರ್ಶೆ. ಲಿಂಗಾಯತರು, ಪ್ರಮುಖವಾಗಿ ಪ್ರಗತಿಪರರು, ತಮಗರಿವಿಲ್ಲದಯೋ ಅಥವಾ ಪ್ರಯತ್ನಪೂರ್ವಕವಾಗಿಯೋ ವಿಭಿನ್ನ ನೆಲೆಗಳಿಂದ ಉಂಟಾಗುತ್ತಿದ್ದ ಬದಲಾವಣೆಗಳಿಗೆ ಪ್ರತಿಕ್ರಿಯೆಯನ್ನು ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಅಭಿವ್ಯಕ್ತಿಗೊಳಿಸಲು ಮಿತಿಗಳಿವೆ ಎಂಬುದನ್ನು ಅರಿತು ತಮ್ಮತನವನ್ನು ರಾಷ್ಟ್ರೀಯಗೊಳಿಸುವ ಮತ್ತು ರಾಷ್ಟ್ರೀಯ ಭಾವನೆಗಳನ್ನು ವ್ಯಕ್ತಪಡಿಸುವ ಉತ್ಕಟತೆಯನ್ನು ಪ್ರದರ್ಶಿಸಿದರು. ಲಿಂಗಾಯತ ಧರ್ಮವನ್ನು ಮತೀಯವಾಗಿ ಸಂಕುಚಿಸುವದಕ್ಕಿಂತ ಮಿಗಿಲಾಗಿ ರಾಷ್ಟ್ರೀಯವಾಗಿಸುವ ಪ್ರಯತ್ನಗಳು ಅವರ ಹೊಸ ಅನುಭವ ಮತ್ತು ಹೊಸ ಅಭಿಲಾಶೆಗಳನ್ನು ಸೂಚಿಸಿದವು. ಇಲ್ಲಿ ಇಂಗ್ಲೀಶ್ ಕಲಿತ ಲಿಂಗಾಯತ ಮಧ್ಯಮ ವರ್ಗದ ಪಾತ್ರ ಹಿರಿದು. ಹೊಸ ಜ್ನಾನದ ಅನುಭವಗಳನ್ನು ಲಿಂಗಾಯತ ಧರ್ಮದ ಮರು-ಚಿಂತನೆಗೆ ಅಳವಡಿಸುವಲ್ಲಿ ಅವರ ಕಾಣಿಕೆ ಲಿಂಗಾಯತರ ಆಧುನಿಕ ಇತಿಹಾಸದಲ್ಲಿ ಒಂದು ಪ್ರಮುಖ ಅಧ್ಯಯನ. ಧರ್ಮದ ಜೊತೆಗೆ ಲಿಂಗಾಯತರ ಇತಿಹಾಸವನ್ನು ವೈಜ್ನಾನಿಕವಾಗಿ ಮತ್ತು ವಸ್ತು/ವ್ಯಕ್ತಿನಿಷ್ಟವಾಗಿ ವಿವರಿಸಬಹುದು ಎಂಬ ಅರಿವು ಲಿಂಗಾಯತರಲ್ಲಿ ಆಗಿ ಹೋದ ರಾಜರು, ಪಾಳೇಯಗರರು ಮತ್ತು ವೀರ ಮಹಿಳೆಯರ ಬಗ್ಗೆ ಗೌರವಗಳನ್ನು ಹೆಚ್ಚಿಸಿತು. ಹೀಗಾಗಿ ಲಿಂಗಾಯತ ಧರ್ಮದ ಜೊತೆಗೆ, ಲಿಂಗಾಯತ ಇತಿಹಾಸವನ್ನೂ ಆಧುನಿಕಗೊಳಿಸುವ ಮತ್ತು ರಾಷ್ಟ್ರೀಯಗೊಳಿಸುವ ಕಾರ್ಯವು ಭರದಿಂದ ಮತ್ತು ಉತ್ಸಾಹದಿಂದ ನಡೆಯಿತು. ಪರಿಣಾಮವಾಗಿ ಹೊಸದು/ಹಳೆಯ ಮತ್ತು ಸಂಪ್ರದಾಯ/ಆಧುನಿಕ ಗಳ ನಡುವಿನ ಸಮುದ್ರ ಮಂಥನ ಏರ್ಪಟ್ಟಿತು.

ಲಿಂಗಾಯತ ಪ್ರಗತಿಪರರಿಗೆ ವೈದಿಕ ಪರಂಪರೆ, ಸಂಸ್ಕ್ರತಮಯ ಲಿಂಗಾಯತ ಧರ್ಮ ಮತ್ತು ಸಾಹಿತ್ಯಗಳು ಪುರಾತನವಾಗಿ ಮತ್ತು ಸಂಪ್ರದಾಯಬದ್ಧವಾಗಿ ಕಂಡಿತು. ಅವರಿಗೆ ವೈದಿಕ ಪರಂಪರೆ, ವರ್ಣಾಶ್ರಮ ವ್ಯವಸ್ಥೆ ಮತ್ತು ಸಂಸ್ಕ್ರತವನ್ನು ಎತ್ತಿ ಹಿಡಿಯುತ್ತಿದ್ದ ಗುರು-ಪೀಠದವರು (ಪಂಚಾಚಾರ್ಯದವರೂ ಸಹ) ಮತ್ತು ಕೆಲವು ವಿರಕ್ತ ಮತದವರು ಸಂಪ್ರದಾಯಸ್ಥರಾಗಿ, ವೈದಿಕಶಾಹಿಯನ್ನು ಮುಂದುವರೆಸುವ ಮತೀಯವಾದಿಗಳಾಗಿ ಗೋಚರಿಸಿದರು. ಇದರ ಪರಿಣಾಮ ಬಸವಣ್ಣನ ಆಧುನಿಕ ಜನ್ಮ. ಬಸವಣ್ಣ ಮತ್ತು ಶಿವಶರಣರ ವಚನ ವಾಜ್ನಯವನ್ನು ಲಿಂಗಾಯತರು ನವೀನ, ಆಧುನಿಕ, ವೈಚಾರಿಕ ಮತ್ತು ಡೆಮಾಕ್ರೆಟಿಕ್ ಅನುಭವಗಳಿಗೆ ಸಂವಾದಿಯಾಗಿ ನೋಡಿದರು. ಇದರ ಜೊತೆಗೆ ಆಧುನಿಕ ಅನುಭವಗಳಿಗೆ ಅನುಗುಣವಾಗಿ ಲಿಂಗಾಯತರು ತಮ್ಮ ಐಡೆಂಟಿಟಿಯನ್ನು ಮರು-ಕಲ್ಪಿಸಿಕೊಳ್ಳುವಲ್ಲಿ ಆಸಕ್ತಿ ವಹಿಸಿದರು. ಪ್ರಗತಿಪರರಲ್ಲಿ ಪ್ರಮುಖವಾಗಿ ಎಂ. ಬಸವಯ್ಯ, ಹಳಕಟ್ಟಿ, ಹರ್ಡೇಕರ್ ಮಂಜಪ್ಪ, ಬಸವನಾಳ, ಬಿಳೆ ಆಂಗಡಿ, ಮುಂತಾದವರು ಬಸವನನ್ನು ೧೨ನೇ ಶತಮಾನದ ಕ್ರಾಂತಿಕಾರ, ಸಮಾನತೆಯ ಹರಿಕಾರ, ಪ್ರಜಾಪ್ರಭುತ್ವದವಾದಿ ಎಂದೆಲ್ಲಾ ಬಣ್ಣಿಸಿದರು. ಸಂಸ್ಕ್ರತ, ಶೈವ ಪುರಾಣಗಳ ಜಾಗದಲ್ಲಿ ಈಗ ಕನ್ನಡದ ವಚನಗಳು ತಲೆ ಎತ್ತಿದವು. ಲಿಂಗಾಯತರಲ್ಲಾಗುತ್ತಿದ್ದ ಈ ಸ್ಥಿತ್ಯಂತರಗಳನ್ನು ಶೌಟೆನ್ನರು ಹೀಗೆ ವಿವರಿಸಿದ್ದಾರೆ,

೨೦ನೇ ಶತಮಾನದ ಎರಡನೆ ದಶಕದಲ್ಲಿ ಲಿಂಗಾಯತರು ಸಂಪ್ರದಾಯಬದ್ಧ ಹಿಂದು ನಂಬಿಕೆಯಿಂದ ದೂರವಾಗುವ ಪ್ರಯತ್ನಗಳನ್ನು ಗಮನಿಸಬಹುದು. ಹಿಂದು ಧರ್ಮದಲ್ಲಿ ಅವರ ಮೇಲ್ಜಾತಿ ಸ್ಥಾನ-ಮಾನಗಳನ್ನು ಭದ್ರಪಡಿಸಲಸಾಧ್ಯವಾದುದರಿಂದ, ಕೆಲವರು ತಮ್ಮ ಸಾಮಾಜಿಕ-ಧಾರ್ಮಿಕ ಪರಂಪರೆಯನ್ನು ಹಿಂದೂತನದ ಜೊತೆಗೆ ಅಥವಾ ಅದಕ್ಕೆ ವಿರೋದವಾಗಿ ಬಿಂಬಿಸಿದರು. ಅವರಲ್ಲಿ ತಾವು ಹಿಂದುಗಳೇ ಎಂಬ ಪ್ರಶ್ನೆಯೂ ಉದ್ಭವವಾಯಿತು. ಕೆಲವರು ಲಿಂಗಾಯತರನ್ನು ಹಿಂದು, ಇಸ್ಲಾಂ, ಕ್ರಿಶ್ಚಿಯನ್ ಮತ್ತು ಜೈನ ಧರ್ಮದಂತೆ ತಮ್ಮದೂ ಒಂದು ಪ್ರತ್ಯೇಕ ಧರ್ಮವೆಂದು, ತಮಗೆ ಪ್ರತ್ಯೇಕ ಧರ್ಮದ ಸ್ಥಾನ-ಮಾನಗಳನ್ನು ಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಈ ರೀತಿಯ ಹೊಸ ವಿಚಾರಧಾರೆಯು ಸಂಸ್ಕ್ರತ ಪರಂಪರೆಯನ್ನು ನಿರ್ಲಕ್ಷಿಸಿ, ಕನ್ನಡ ಪರಂಪರೆಯನ್ನು ಎತ್ತಿ ಹಿಡಿಯಿತು. ಬಸವನನ್ನು ಮತ ಸ್ಥಾಪಕನೆಂದು ಬಿಂಬಿಸಲಾಗದಿದ್ದರೂ, ಅವನು ಮತೋದ್ಧಾರಕನೆಂದು ಪೂಜ್ಯ ಭಾವನೆಯಿಂದ ನೋಡಲು ಪ್ರಾರಂಭವಾಯಿತು. ಪಿ.ಜಿ. ಹಳಕಟ್ಟಿಯಂತವರ ಪರಿಶ್ರಮದಿಂದ ವಚನ ಸಾಹಿತ್ಯದ ಅಮೂಲ್ಯತೆಯನ್ನು ಅರಿತುಕೊಳ್ಳಲಾಯಿತು. ಅವರ ವಚನ ಅಧ್ಯಯನಗಳು ಲಿಂಗಾಯತರಲ್ಲಿ ಹೊಸ ವಿಚಾರಗಳನ್ನುಂಟು ಮಾಡಿತು. ಆದಾಗ್ಯು ಎಲ್ಲಾ ಲಿಂಗಾಯತರು ಪ್ರಗತಿಪರವಾಗಿರಲಿಲ್ಲ. ವಿಶೇಷವಾಗಿ ಪಂಚಪೀಠಗಳ ಜೊತೆಗೆ ಸಂಪರ್ಕವಿರಿಸಿಕೊಂಡಿದ್ದ ಮತ್ತು ಪಂಚಾಚಾರ್ಯರಲ್ಲಿ ನಂಬಿಕೆ ಇದ್ದವರು ಬಸವನನ್ನು ಒಪ್ಪಿಕೊಳ್ಳದೆ ಸಂಸ್ಕ್ರತ ಪರಂಪರೆಯನ್ನು ಮುಂದುವರೆಸಿದರು. ಇದರಲ್ಲಿ ಪಂಡಿತ ಕಾಶಿನಾಥ ಶಾಸ್ತ್ರಿ ಮತ್ತು ಅವರ ಅನುಯಯಿಗಳ ಪಾತ್ರ ಗಣನೀಯವಾಗಿತ್ತು. (ಶೌಟೆನ್, ೧೯೯೫:; ೭೭-೭೮)

ತಮ್ಮ ಧಾರ್ಮಿಕ ಮೌಲ್ಯಗಳನ್ನು ಮರು-ಪರಿಶೀಲಿಸುವ ಮತ್ತು ಹೊಸ, ಹೊಸ ಮೌಲ್ಯಗಳನ್ನು ಕಟ್ಟಿಕೊಳ್ಳುವುದರ ಜೊತೆಗೆ, ಕನ್ನಡ ಸಮಾಜವು ಹಿಂದಿನಿಂದಲೂ ಕ್ರಾಂತಿಕಾರ ಮತ್ತು ಮಾನವತ ವಿಚಾರಗಳನ್ನು ಹೊಂದಿತ್ತು ಎಂದು ಪ್ರಗತಿಪರರು ನಂಬಿದ್ದರು. ಆದರೆ ಕಾಲಾಂತರ ಮತ್ತು ಕಾರಣಾಂತರದಿಂದ ಕಳೆದು ಹೋದ ಈ ಸುವರ್ಣ ಯುಗವನ್ನು ಮತ್ತೆ ಮರಳಿ ಪಡೆಯಬಹುದು ಮತ್ತು ಇದು ಶಿವ-ಶರಣರ ಸಿದ್ಧಾಂತ/ನಂಬಿಕೆಗಳನ್ನು ಮರುಕಳಿಸುವುದರ ಅಥವಾ ಮತ್ತೆ ಸ್ಥಾಪಿಸುವುದರ ಮೂಲಕ ಸಾಧ್ಯವೆಂದು ಪ್ರತಿಪಾದಿಸಿದರು. ಪಾಶಾತ್ಯರಿಂದ, ಬ್ರಾಹ್ಮಣ ಪಂಡಿತರಿಂದ ಮತ್ತು ಲಿಂಗಾಯತ ಸಂಪ್ರದಾಯಸ್ಥ಼ರಿಂದ ನಿರ್ಲಕ್ಷ್ಯಗೊಳಗಾದ ಮತ್ತು ತಪ್ಪು ವ್ಯಾಖ್ಯನಿಸಲ್ಪಟ್ಟ ಲಿಂಗಾಯತ ಧರ್ಮವನ್ನು ವಚನ ವಾಜ್ನಯದ ಮುಖೇನ ಸರಿಪಡಿಸುವ ಹೊಣೆ ಹೊತ್ತಿದ್ದು ಹಳಕಟ್ಟಿಯಂತವರು. ಲಿಂಗಾಯತರನ್ನು ಸುಧಾರಿಸುವ ಮತ್ತು ವಚನಗಳನ್ನು ಜಪ್ರಿಯಗೊಳಿಸುವ ಮಹದಾಸೆಯನ್ನು ಹೊಂದಿದ್ದ ಅವರ ಜೊತೆಗೆ ಕೈ ಜೊಡಿಸಿದವರು ಹರ್ಡೇಕರ್ ಮಂಜಪ್ಪನವರು. ಬಸವ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸುವದನ್ನು ಆರಂಭಿಸಿದ ಮಂಜಪ್ಪನವರು ಬಸವನನ್ನು ಲಿಂಗಾಯತರ ಆರಾಧ್ಯ ದೈವವನ್ನಾಗಿಸುದದಲ್ಲದೆ, ಕರ್ನಾಟಕದ ಸಂಸ್ಕ್ರತಿಯ ಹೆಮ್ಮೆ ಎಂಬಂತೆ ಬಿಂಬಿಸಿದರು. ೧೯೧೩ರಲ್ಲಿ ಮೊಟ್ಟ ಮೊದಲಿಗೆ ಹರ್ಡೇಕರ್ ಮಂಜಪ್ಪನವರು ಮತ್ತು ಚಿತ್ರದುರ್ಗದ ಮ್ರತ್ಯುಂಜಯ ಸ್ವಾಮಿಗಳು ಬಸವ ಜಯಂತಿಯನ್ನು ಎಪ್ರಿಲ್ ಮಾಹೆಯಲ್ಲಿ ಆಚರಿಸುವದಕ್ಕೆ ನಾಂದಿ ಹಾಡಿದರು. ಅದೇ ವರ್ಷದಂದು ದಾವಣಗೆರೆಯಲ್ಲಿ ಬಸವ ಜಯಂತಿಯನ್ನು ಸಂಕ್ಷಿಪ್ತವಾಗಿ ಆಚರಿಸಲಾಯಿತು. ಮಹಾರಾಷ್ಟದ ಶಿವಾಜಿ ಜಯಂತಿ ಮತ್ತು ತಮಿಳು ನಾಡಿನ ರಾಮೋತ್ಸವದ ಮಾದರಿಯಲ್ಲಿ ಬಸವ ಜಯಂತಿಯನ್ನು ಪ್ರತಿ ವರ್ಷವು ಆಚರಿಸಬೇಕೆಂದು ನಿರ್ಧರಿಸಲಾಯಿತು. ಕ್ರಮೇಣ ಬಸವ ಜಯಂತಿಯು ಲಿಂಗಾಯತರ ಮುಖ್ಯ ಹಬ್ಬಗಳಲ್ಲಿ ಒಂದಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.

ಲಿಂಗಾಯತರ ಸಾಮಾಜಿಕ ಸುಧಾರಣೆಯು ಹಿಂದುಳಿದ ಬ್ರಾಹ್ಮಣೇತರ ಚಳುವಳಿಯ ಜೊತೆ, ಜೊತೆಗೆ ಸಾಗಿತು. ೧೯೧೦ರ ಸುಮಾರಿನಲ್ಲಿ ಬಿರುಸಾದ ಚಳುವಳಿಯು ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಒತ್ತಾಯವನ್ನು ಹೇರುವುದರ ಜೊತೆಗೆ ಬ್ರಾಹ್ಮಣ-ವಿರೊಧಿ ಅಲೆಯಾಗಿ ಶಕ್ತಿಯುತವಾಗಿ ಬೆಳಿಯಿತು. ಮೈಸೂರು ಪ್ರಾಂತ್ಯದಲ್ಲಿ ಈ ಚಳುವಳಿಯು ತೀವ್ರವಾಗಿತ್ತು. ಬಾಂಬೆ ಪ್ರೆಸಿಡೆನ್ಸಿಯಲ್ಲೂ ಸಹ ಲಿಂಗಾಯತರು ಬ್ರಾಹ್ಮಣೇತರ ಚಳುವಳಿಯಲ್ಲಿ ಸಕ್ರೀಯರಾಗಿದ್ದರು ಎಂಬುದಕ್ಕೆ ಸಾಕಷ್ಟು ಅಧಾರಗಳಿವೆ. ಬ್ರಾಹ್ಮಣತ್ವದ ಟೀಕೆ ಮತ್ತು ಮೀಸಲಾತಿ ಹೋರಾಟವು ಕ್ರಮೇಣವಾಗಿ ಲಿಂಗಾಯತರ ಆಂತರಿಕ ವಿಮರ್ಶೆಯಾಗಿ ಬೆಳೆಯಿತು. ಉದಾಹರಣೆಗೆ, ಬ್ರಾಹ್ಮಣೇತರ ಚಳುವಳಿಯ ಲಿಂಗಾಯತ ಮುಖಂಡರಾದ ಎಂ. ಬಸವಯ್ಯನವರು ವೀರಶೈವ ಮಹಾಸಭೆಯು ವರ್ಣಾಶ್ರಮಧರ್ಮವನ್ನು ಅಂಗಿಕರಿಸಿದ್ದನ್ನು (೧೯೦೯ರ ಸಮಾವೇಶದಲ್ಲಿ) ಬಲವಾಗಿ ವಿರೋಧಿಸಿದರು (ದೇವಿರಪ್ಪ, ೧೯೮೫ : ೧೫). ಕುಲೀನ ಲಿಂಗಾಯತರ ಮೇಲ್ತರಗತಿಯ ಮತ್ತು ಡಂಬಾಚಾರದ ನಡುವಳಿಕೆಯನ್ನು ತೀಕ್ಷ್ಣವಾಗಿ ಟೀಕಿಸುವದರಲ್ಲಿ ಬಸವಯ್ಯನವರು ಮೊದಲಿಗರು. ಲಿಂಗಾಯತರಲ್ಲಿ ಅನೇಕರು ಬಸವಯ್ಯನವರಂತೆ ಯೋಚಿಸುವವರಿದ್ದರು. ಸ್ವಾತಂತ್ರ್ಯ ಯೋಧರಾದ ತಮ್ಮಣಪ್ಪ ಚಿಕ್ಕೊಡಿಯವರ ಹೆಸರು ಇಲ್ಲಿ ಎದ್ದು ಕಾಣುತ್ತದೆ. ಅವರು ಅವಕಾಶ ಸಿಕ್ಕಾಗಲೆಲ್ಲ ವೀರಶೈವ ಮಹಾಸಭೆಯನ್ನು ಟೀಕಿಸದೆ ಬಿಡುತ್ತಿರಲಿಲ್ಲ. ಅವರ ಪ್ರಕಾರ ವೀರಶೈವ ಮಹಾಸಭೆಯು ಕೆಲವೇ ಕೆಲವು ವ್ಯಕ್ತಿಗಳ ಹಿತಾಸಕ್ತಿಯನ್ನು ಪೂರೈಸಲು ಹುಟ್ಟಿಕೊಂಡದ್ದು (ಕುಳ್ಳಿ, ೧೯೮೩; ೨೭೦).

ಲಿಂಗಾಯತ ಪ್ರಗತಿಪರರು ತಮ್ಮ ಸಮುದಾಯವನ್ನು ಪ್ರಜಾತಾಂತ್ರಿಕಗೊಳಿಸಿ, ಲಿಂಗಾಯತರಲ್ಲಿದ್ದ ಮೇಲು-ಕೀಳು ಭಾವನೆಗಳನ್ನು ನಿರ್ಮೂಲನಗೊಳೀಸಬೇಕೆಂದು ಪ್ರಯತ್ನ ಪಟ್ಟರು. ಇಲ್ಲಿ ಆಂತರಿಕ ಟೀಕೆ ಮತ್ತು ಬ್ರಾಹ್ಮಣತ್ವ-ವಿರೋಧಿ ಅಲೆಯು ಲಿಂಗಾಯತರು ಜಾತ್ಯಾತಿತವಾಗುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ಆದರೆ ಜಾತ್ಯಾತೀತವಾಗುವ ಪ್ರಕ್ರಿಯೆಯು ಇತರರನ್ನು ಟೀಕಿಸುವ/ವಿರೋಧಿಸುವ (ಜಾತಿ/ಧರ್ಮದ ಆದಾರದ ಮೇಲೆ) ವಿಪರ್ಯಾಸ/ವೈರುಧ್ಯವನ್ನು ಒಳಗೊಂಡಿತ್ತು. ಪ್ರಗತಿಪರರಿಗೆ ಸ್ವಾಭಾವಿಕವಾಗಿ ಬಸವಣ್ಣ ಮತ್ತು ಇತರ ಶಿವ ಶರಣರು ಮಾದರಿಗಳಾದರು. ಸಮಾಜ ಸುಧಾರಣೆ ಮತ್ತು ಸಮುದಾಯದ ಪ್ರಗತಿಯ ಸಮರ್ಥನೆಗೆ ಪ್ರಗತಿಪರರು ಆಧುನಿಕತೆಯ ಮೇಲೆ ಮಾತ್ರವೆ ಅವಲಂಬಿತವಾಗಿರಲಿಲ್ಲ. ಸಂಪ್ರದಾಯವನ್ನೂ ಸಹ ತಮ್ಮ ಪ್ರಗತಿಪರ ಹೋರಾಟಕ್ಕೆ ಉಪಯೋಗಿಸಿಕೊಂಡರು. ಆದರೆ ಪ್ರಗತಿಪರರಿಗು ಮತ್ತು ಸಂಪ್ರದಾಯವಾದಿಗಳಿಗು ಇದ್ದ ವ್ಯತ್ಯಾಸ ‘ಯಾವುದು ನಿಜವಾದ ಸಂಪ್ರದಾಯ, ಯಾವುದು ಅಲ್ಲ ಮತ್ತು ಸಂಪ್ರದಾಯವೆಂದರೇನು’ ಎಂದು ನಿರ್ಧರಿಸುವಲ್ಲಿ. ಲಿಂಗಾಯತರಲ್ಲಿ ಅಡಗಿದ್ದ ಡಂಬಾಚಾರಗಳು, ಮೂಡ ಆಚಾರ-ವಿಚಾರಗಳನ್ನು ಟೀಕಿಸುತ್ತಿದ್ದ ಪ್ರಗತಿಪರರು ಕ್ರಮೇಣವಾಗಿ ಗುರುಸ್ಥಲ/ಪಂಚಾಚಾರ್ಯರ ಆಚಾರ-ವಿಚಾರಗಳನ್ನು ತಿರಸ್ಕರಿಸಲು ಪ್ರಾರಂಭಿಸಿದರು. ಇದೇ ಸಮಯದಲ್ಲಿ ವಿರಕ್ತ ಮಠಾಧೀಶರು ತಮ್ಮ ಸಮುದಾಯದಲ್ಲಿ ಆಗುತ್ತಿದ್ದ ಬದಲಾವಣೆಗಳ ಲಾಭ ಪಡೆಯಲು ಹಾತೊರೆಯುತ್ತಿದ್ದರು. ತಮ್ಮೊಳಗೆ ಅಸಮಾನತೆ, ಪಕ್ಷಪಾತ ಮತ್ತು ಗೊಂದಲಗಳನ್ನು ಒಳಗೊಂಡಿದ್ದರೂ, ವಿರಕ್ತ ಮಠಾಧೀಶರು ಗುರು-ಸ್ಥಲದವರನ್ನು ಟೀಕಿಸಲು ಮತ್ತು ಅವರನ್ನು ಅವಮಾನಿಸಲು ಶಿವ ಶರಣರ ತತ್ವಗಳನ್ನು ಉಪಯೋಗಿಸಿದರು. ಶಿವ ಶರಣರನ್ನು ಆಧಾರವಾಗಿರಿಸಿಕೊಂಡು ಅನೇಕ ಕೆಳಜಾತಿಯವರನ್ನು ಲಿಂಗಾಯತ ಮತಕ್ಕೆ ಮತಾಂತರಗೊಳಿಸುವಲ್ಲಿ ವಿರಕ್ತ ಮಠಾಧೀಶರು ಸಕ್ರೀಯ ಪಾತ್ರ ನಿರ್ವಹಿಸಿದರು. ೧೯೨೦ರಲ್ಲಿ ಬಾಳೆಹಳ್ಳಿ ಮಠಾಧೀಶರು ಈ ಮತಾಂತರಗಳಿಂದ ವೀರಶೈವ ಧರ್ಮವು ಮೈಲಿಗೆಯಾಯಿತೆಂದು ಇದಕ್ಕೆಲ್ಲಾ ಕಾರಣ ಬಸವಣ್ಣನ ತತ್ವಗಳು ಎಂದು ತೆಗಳಿದರು.

ಲಿಂಗಾಯತರ ಬ್ರಾಹ್ಮಣ ವಿರೋದಿ ನಿಲುವು ಮತ್ತು ಮೀಸಲಾತಿ ಚಳುವಳಿಯು ಸಮುದಾಯದ ಒಳಿತಿಗಾಗಿ ಮತ್ತು ಉದ್ಧಾರಕ್ಕಾಗಿ ಎಂದು ವರ್ಣಾಶ್ರಮದ (ಗುರು ಮತ್ತು ಕೆಲವು ವಿರಕ್ತ ಸಂಪ್ರದಾಯದವರು) ಸಮರ್ಥಕರು ನಂಬಿದ್ದರು. ಆದರೆ ಕ್ರಮೇಣ ಅವು ತಮ್ಮ ಸಾಮಾಜಿಕ ಮತ್ತು ಧಾರ್ಮಿಕ ಸ್ಥಾನ-ಮಾನಗಳನ್ನು ಅಲುಗಾಡಿಸುತ್ತಿದುದು ಅವರಲ್ಲಿ ಕಳವಳವನ್ನುಂಟು ಮಾಡಿತು. ಬ್ರಾಹ್ಮಣೇತರ ಚಳುವಳಿಯ ಪ್ರಭಾವ ಮತ್ತು ಪ್ರಗತಿಪರರ ಸಮಾಜ ಸುಧಾರಣೆ, ವರ್ಣಾಶ್ರಮ ಧರ್ಮದ ಸಮರ್ಥಕರಿಗೂ ಮತ್ತು ಅವರ ವಿರೋಧಿಗಳ ನಡುವೆ ಇದ್ದ ಐಡಾಲಜಿಯ ಕಂದರವನ್ನು ಮತ್ತಷ್ಟು ಹೆಚ್ಚಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಗುರುಸ್ಥಲದವರು ಶುಭೋದಯ ವಿವಾದದಲ್ಲಿ ವ್ಯತಿರಿಕ್ತವಾಗಿ ನಡೆದುಕೊಂಡರು. ಈ ವಿವಾದವು ಪ್ರಗತಿಪರ ಲಿಂಗಾಯತರಿಗೆ ಕೆಲವೊಂದು ಪಾಠಗಳನ್ನು ಕಲಿಸಿತು. ೧೨ನೇ ಶತಮಾನದ ಶರಣ ಚಳುವಳಿ ಮತ್ತು ಶಿವ ಶರಣರ ತತ್ವಗಳನ್ನು ಜನಪ್ರಿಯಗೊಳಿಸಬೇಕಾದರೆ ಮತ್ತು ಇರುವ ತಪ್ಪು ಗ್ರಹಿಕೆಗಳನ್ನು ಸರಿ ಪಡಿಸಬೇಕಾದರೆ, ಅದಕ್ಕೆ ಒಂದು ಶಕ್ತಿಯುತವಾದ ಐಡಿಯಾಲಜಿಯ ಅವಶ್ಯಕತೆ ಇದೆ ಎಂದು ಮನಗಂಡರು. ಆಂಗ್ಲೋ-ಹಿಂದು ಕಾನೂನು ಪದ್ದತಿಯಲ್ಲಿ ನುರಿತರಾಗಿದ್ದು, ಕಾನೂನು ತಜ್ನರಾದ ಪಾವಟೆ, ಹಳಕಟ್ಟಿ, ಮುಂತಾದ ಲಿಂಗಾಯತರಿಗೆ ಇದರ ಅರಿವು ಹೆಚ್ಚು ಆಯಿತು. ವಿವಾದಕ್ಕೆ ಸಂಭಂದಿಸಿದಂತೆ ಕೋರ್ಟಿನಲ್ಲಿ ಜರುಗಿದ ವ್ಯಾಜ್ಯದ ವಾದ-ವಿವಾದಗಳು ಹಳಕಟ್ಟಿಯಂತವರಿಗೆ ಸರಿ ಬಿಳಲಿಲ್ಲ. ಆಧುನಿಕ ಕೊರ್ಟ್/ಕಾನೂನು ಪಧ್ದತಿಗಳು ಒಂದು ಸಮುದಾಯದ ಸಂಸ್ಕ್ರತಿ ಮತ್ತು ಸಮಾಜದ ಬಗ್ಗೆ ತಿಳಿದುಕೊಳ್ಳಲು ನಿಖರವಾದ ಆಧಾರ, ಪದ್ಧತಿ, ಸಾಮಾಜಿಕ ವ್ಯವಸ್ಥೆಗಳನ್ನು ಪರಿಗಣಿಸುವದರಿಂದ, ಪಾವಟೆ ಮತ್ತು ಹಳಕಟ್ಟಿಯವರಿಗೆ ತಮ್ಮ ಸಮುದಾಯದ ಬಗ್ಗೆ ಇದ್ದ ಗೊಂದಲ, ಅಸ್ಪಷ್ಟತೆ ಮತ್ತು ಅವ್ಶೆಜ್ನಾನಿಕ ಇತಿಹಾಸ ಪ್ರಜ್ನೆಗಳನ್ನು ಸರಿಪಡಿಸುವ ಜರೂರತ್ತು ಹಿಂದಿಗಿಂತಲೂ ಇಂದು ತೀವ್ರವಾಗಿತ್ತು. ಜೊತೆಗೆ ಆಂತರಿಕ ವೈಷಮ್ಯ ಮತ್ತು ಬ್ರಾಹ್ಮಣ-ವಿರೋಧಿ ಭಾವನೆಗಳು ಲಿಂಗಾಯತರನ್ನು ದಾರಿ ತಪ್ಪಿಸುತ್ತಿದುದು ಹಳಕಟ್ಟಿಯಂತವರಿಗೆ ಸ್ಪಷ್ಟವಾಗಿ ಗೊಚರಿಸಿತು. ಇದರ ಪರಿಣಾಮವಾಗಿಯೇ ಪಾವಟೆಯಂತವರು ಗುರು-ಸಂಪ್ರದಾಯ ಅನುಯಾಯಿಗಳಿಗೆ ವಿರುದ್ಧವಾಗಿ ತಮ್ಮ ಲೇಖನದಲ್ಲಿ ಬಸವಣ್ಣನನ್ನು ಲಿಂಗಾಯತನು ಎಂದು ಬಲವಾಗಿ ವಾದಿಸಿದುದು. ಶುಭೋದಯ ವ್ಯಾಜ್ಯದಲ್ಲಿ ಪ್ರಮುಖ ಪಾತ್ರವಹಿಸಿದ ಪಾವಟೆಯವರ ವಾದಗಳಿಗೆ ವಿರುದ್ಧವಾಗಿ ಮತ್ತು ಸಮಾಜದಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ಸವಾಲಾಗಿ ಸ್ವಿಕರಿಸಿದ ಗುರು-ಸಂಪ್ರದಾಯದರಿಗೆ ಬಸವಣ್ಣನ ಮತ್ತು ಇತರ ಶಿವ ಶರಣ ಬಗ್ಗೆ ಅನೇಕ ಅನುಮಾನಗಳನ್ನು ಮತ್ತು ಪ್ರಶ್ನೆಗಳನ್ನು ಹುಟ್ಟು ಹಾಕುವ ತುರ್ತು ಪರಿಸ್ಥಿತಿ ಗುರುತರವಾಗಿ ಕಾಡಿತು. ಇವೆಲ್ಲದರ ಪರಿಣಾಮವಾಗಿಯೇ, ಲೇಖನದ ಮೊದಲಲ್ಲಿ ಚರ್ಚಿಸಲ್ಪಟ್ಟ ವಾದಗಳು, ಬಸವಣ್ಣನು ಸ್ಮಾರ್ತ ಬ್ರಾಹ್ಮಣನೋ ಅಥವಾ ಲಿಂಗಾಯತನೋ ಎಂಬ ವಿವಾದ ಉಂಟಾಗಿದುದು. ಬಸವಣ್ಣನ ಮತ್ತು ಇತರ ಶಿವ ಶರಣರ ಜಾತಿ-ಹುಟ್ಟಿನ ಪ್ರಶ್ನೆಗಳನ್ನು ಹಾಕುವುದರ ಮೂಲಕ ಅವರ ಪ್ರಾಮುಖ್ಯತೆಯನ್ನು ತಗ್ಗಿಸುವ ಪ್ರಯತ್ನವನ್ನು ಅವರು ಮಾಡಿದರು.

ಬಸವಣ್ಣನು ಲಿಂಗಾಯತ ಮತ ಸ್ಥಾಪಕನು ಎಂಬ ಪ್ರಚಾರ ಕುಬುಸದ ಮತ್ತು ಕಾಶಿನಾಥ ಶಾಸ್ತ್ರಿಯಂತವರನ್ನು ಗಾಬರಿಗೊಳಿಸಿತ್ತು. ವೇದ ಕಾಲದಿಂದಲೂ ವೀರಶೈವ ಮತವಿತ್ತು ಮತ್ತು ಅದನ್ನು ಸ್ಥಾಪಿಸಿದವರು ಪಂಚ ಆರಾಧ್ಯರು ಎಂದು ಬಲವಾಗಿ ನಂಬಿದ್ದ ಅವರಿಗೆ ಹೊಸ ಅಲೆಯು ಆತಂಕವನ್ನುಂಟು ಮಾಡಿತು. ಹೀಗಾಗಿ ಅವರಿಗೆ ಬಸವಣ್ಣನು ಶೈವ ಬ್ರಾಹ್ಮಣ ಜಾತಿಗೆ ಸೇರಿದ ಮತ್ತು ವೀರಶೈವ ಮತವನ್ನು ಉದ್ಧಾರಿಸಿದ ಧರ್ಮಕರ್ತನೆ ಹೊರತು, ವೇದ ಅಥವಾ ಶೈವ ಸಂಸ್ಕ್ತತವನ್ನು ಬಹಿಷ್ಕರಿಸಿದ ಸಮಾಜ ಸುಧಾರಕನಲ್ಲ. ಆದರೆ ಪಾವಟೆಯಂತವರಿಗೆ ಬಸವಣ್ಣನು ಸಮಾಜ ಸುಧಾರಕನಲ್ಲದಿದ್ದರೂ, ಲಿಂಗಾಯತ ಜಾತಿಗೆ ಸೇರಿದ ಮಹಾನ್ ವ್ಯಕ್ತಿ. ಬಸವಣ್ಣನು ಪೂರ್ವದಲ್ಲಿ ಪ್ರಾಕ್ರತ ಬ್ರಾಹ್ಮಣರಾದ ಮಾದರಸ, ಮಾದಲಾಂಬೆಯರಿಗೆ ಜನಿಸಿದ್ದರೂ, “ಗುರುವಿನ ನಿರ್ಮಲವಾದ ಕರಕಮಲದಲ್ಲಿ ಹುಟ್ಟಿದುದರಿಂದ ಬಸವಣ್ಣನ ಜಾತ್ಯಾದಿಗಳನ್ನು ಕಲ್ಪಿಸಕೂಡದೆಂದು” (೧೯೨೨:೨೪)ವಾದಕ್ಕೆ ಅಂತ್ಯ ಎಳಿಯುವ ಪ್ರಯತ್ನ ಮಾಡುತ್ತಾರೆ. ಬಸವಣ್ಣನ ಜಾತ್ಯಾದಿಗಳನ್ನು ಕಲ್ಪಿಸಕೂಡದೆಂದು ವಾದಿಸುತ್ತಾ, ಆತನನ್ನು ಲಿಂಗಾಯತ ಜಾತಿಗೆ ಗುರುತಿಸಿಕೊಳ್ಳುವ ವಿರೋದಾಭಾಸವನ್ನು ಪಾವಟೆಯವರಲ್ಲಿ ಕಾಣಬಹುದು. ಹೀಗೆ ವಾದಿಸುವಲ್ಲಿ ಪಾವಟೆಯವರಿಗೆ ಲಿಂಗಾಯತರು ಪ್ರತ್ಯೇಕವಾದ ಮತವನ್ನು ಹೊಂದಿದ ಸಮೂದಾಯ ಎಂಬ ಅಚಲವಾದ ನಂಬಿಕೆ ಇತ್ತು. ಇಲ್ಲಿ ಮತ್ತೊಂದು ಸೂಕ್ಷತೆಯನ್ನು ನಾವು ಗಮನಿಸಬೇಕು. ಈ ಸೂಕ್ಷತೆಯು ಪಾವಟೆ ಮತ್ತು ಪ್ರಗತಿಪರ ಹಳಕಟ್ಟಿ, ಹರ್ಡೆಕರ್ ಮಂಜಪ್ಪ, ಮುಂತಾದವರ ನಡುವೆ ಇದ್ದ ತಾತ್ವಿಕ ವ್ಯತ್ಯಾಸಗಳು. ಪಾವಟೆಯವರು ಪಂಚಾಚಾರ್ಯರ ವಿರುದ್ಧವಿದ್ದರೂ, ಅವರು ವೇದ ವಿರೋದಿಗಳಲ್ಲ. ಜೊತೆಗೆ ಅವರು ಅನೇಕ ವಿಷಯಗಳಲ್ಲಿ ಸಂಪ್ರದಾಯಿಗಳಾಗಿ ಗೋಚರಿಸುತ್ತಾರೆ. ವೀರಶೈವ ಧರ್ಮವು ವೈದಿಕವಾದುದು ಮತ್ತು ಸನಾತನವಾದುದು ಎಂಬ ತೀವ್ರ ದ್ರಷ್ಟಿಕೋನವನ್ನು ಹೊಂದಿದವರಾಗಿದ್ದರು. ವಾದದ ಭರದಲ್ಲಿ ಒಮ್ಮೆ ಅವರು ಹೀಗೆ ಬರೆಯುತ್ತಾರೆ “ಶ್ರೀ ಬಸವೇಶನು ನೀಚ ಜಾತಿಯವರಿಗಾರಿಗೂ ಲಿಂಗಧಾರಣ ಮಾಡಿಲ್ಲ” (೧೯೨೨:೧೨೨). ಇಲ್ಲಿ ಪಾವಟೆಯವರ ಜಾತಿ/ವಿಜಾತಿ ಎಂಬ ಮನೋಭಾವನೆಯನ್ನು ಕಾಣಬಹುದು. ಹಳಕಟ್ಟಿಯಂತವರು ಇಂತಹ ವಾದ-ವಿವಾದಗಳಿಂದ ದೂರವಿದ್ದವರು. ಅವರು ಬಸವಣ್ಣನು ಜಾತಿ-ಹುಟ್ಟಿನ ಜಂಜಾಟಗಳಿಂದ ದೂರಾದ ಮತ್ತು ಪ್ರಗತಿಪರ ವಿಚಾರಗಳನ್ನು ಸಾರ್ವತ್ರಿಕಗೊಳಿಸಿದ ಶ್ರೇಷ್ಟ ವ್ಯಕ್ತಿ ಎಂದು ಚಿತ್ರಿಸಿದರು. ತಮ್ಮ ಲೇಖನಗಳ ಮತ್ತು ಭಾಷಣಗಳ ಮುಲಕ ಈ ಅಭಿಪ್ರಾಯವನ್ನು ಪ್ರಚಾರ ಮಾಡುತ್ತಿದ್ದರು. ಇಷ್ಟೆಲ್ಲಾ ವಾದ-ವಿವಾದಗಳು ಉಂಟಾದರು ಬಸವಣ್ಣನು ಮೂಲತ: ಬ್ರಾಹ್ಮಣ ಎಂದು ಸಾರ್ವತ್ರಿಕವಾಗಿ ಉಳಿಯಲು ಕಾರಣವೇನು?

IV

“ಆಳಿವರ ಉಳಿವರ ಸುಳಿವರ ನಿಲವ ನೋಡಿ ಕಂಡು”:
ಬ್ರಾಹ್ಮಣನಾಗಿ ಬಸವಣ್ಣ

ಅನೇಕ ವಿದ್ವಾಂಸರು ಮತ್ತು ಪ್ರಗತಿಪರರಿಗೆ ಬಸವಣ್ಣನು ಬ್ರಾಹ್ಮಣನಾಗಿ ಬ್ರಾಹ್ಮಣ್ಯವನ್ನು ತಿರಸ್ಕರಿಸಿ ವೀರಶೈವ/ಲಿಂಗಾಯತ ಮತವನ್ನು ಮತ್ತು ಸಮಾನತೆಯನ್ನು ಪ್ರತಿಪಾದಿಸಿದನು ಎಂಬ ನಂಬಿಕೆಯು ಆಗಿನ ಪ್ರಗತಿದಾಯಕ ಹಾಗು ಪ್ರಜಾಪ್ರಭುತ್ವವಾಗಿ ಗೋಚರಿಸಿತು. ಹೀಗಾಗಿ ಅನೇಕ ಪ್ರಗತಿಪರ ಲಿಂಗಾಯತ ವಿದ್ವಾಂಸರು (ಉದಾ. ಬಿಳೆ ಅಂಗಡಿ) ಮತ್ತು ಬ್ರಾಹ್ಮಣ ಸಾಹಿತ್ಯಕಾರರು (ಎಮ್.ಆರ್. ಶ್ರೀನಿವಾಸಮೂರ್ತಿ, ಟಿ.ಎಸ್. ವೆಂಕಣ್ಣಯ್ಯ, ಆರ್.ಆರ್. ದಿವಾಕರ್, ಮಾಸ್ತಿ, ಇತ್ಯಾದಿ) ಬಸವಣ್ಣನನ್ನು ಮೂಲತ: ಬ್ರಾಹ್ಮಣನೆಂದು ತಮ್ಮ ಲೇಖನಗಳ ಮೂಲಕ ಪಸಿದ್ಧಿ ಪಡಿಸಿದರು. ಇವರ ನಂಬಿಕೆ ಮೂಲಾಧಾರವಾಗಿ ಇದ್ದ ಮಾಹಿತಿಗಳೇನೆಂದರೆ ಬಸವಣ್ಣನ ಬಗ್ಗೆ ಇದ್ದ ಪುರಾಣಗಳು ಮತ್ತು ಐತಿಹ್ಯಗಳು. ಇವರಲ್ಲಿದ್ದ ಒಂದು ಚಾರಿತ್ರಿಕ ವೈರುದ್ಯವನ್ನು ನಾವು ಗಮನಿಸಬೇಕು. ಅದೇನೆಂದರೆ ಬಸವಣ್ಣನ ಹುಟ್ಟು ಮತ್ತು ಜಾತಿಯ ಬಗ್ಗೆ ಮಾತನಾಡುವಾಗ ಅನೇಕರಿಗೆ ಪುರಾಣಗಳು ಅಥವಾ ಶಾಸನಗಳು ಆಧಾರವಾದರೆ, ಸಮಾನತೆ ಮತ್ತು ಇತರ ಪ್ರಗತಿಪರ ವಿಚಾರಗಳ ಬಗ್ಗೆ ವಾದಿಸಬೇಕಾದರೆ ವಚನಗಳು ಆಸರೆಗಳಾಗಿದ್ದವು. ಇವರೆಲ್ಲರೂ ತಮ್ಮ ಆಸಕ್ತಿ, ಹಿನ್ನಲೆ ಮತ್ತು ಉದ್ದೇಶಗಳುಗುಣವಾಗಿ ಒಮ್ಮೊಮ್ಮೆ ಪುರಾಣಗಳನ್ನು, ಮಗದೊಮ್ಮೆ ವಚನಗಳನ್ನು ಬಳಸಿಕೊಂಡಿದ್ದಾರೆ. ಹಾಗಾಗಿ ಶಿವ ಶರಣರ ಚರಿತ್ರೆಯ ಬಗ್ಗೆ ಏಕತಾನತೆ ಅಥವಾ ಏಕದ್ರಷ್ಟಿಕೋನವಿಲ್ಲ. ಇವೆಲ್ಲದರ ಪರಿಣಾಮವಾಗಿ ಶಿವ ಶರಣರ ಹುಟ್ಟು ಮತ್ತು ಜಾತಿಯ (ವಿಶೇಷವಾಗಿ ಬಸವಣ್ಣ) ಬಗ್ಗೆ ಇದ್ದ ವಾದ-ವಿವಾದಗಳು ಮತ್ತಿಷ್ಟು ಜಟಿಲತೆ, ವೈರುಧ್ಯ ಮತ್ತು ಸಂಕೀರ್ಣತೆಯನ್ನು ಹೊಂದಿದವು. ಬಹುತೇಕರು ಬಸವಣ್ಣನನ್ನು ಬ್ರಾಹ್ಮಣನನ್ನಾಗಿ ಪರಿಭಾವಿಸಿದರೆ, ಇನ್ನು ಕೆಲವರು ಲಿಂಗಾಯತನನ್ನಾಗಿ ಚಿತ್ರಿಸಿದರು. ಈ ವಾದ-ವಿವಾದಗಳು ವಸಾಹತ್ತೊತ್ತರ ಕಾಲ ಘಟ್ಟದಲ್ಲೂ ಮುಂದುವರೆಯಿತು. ನನ್ನ ಭಾವನೆಯಲ್ಲಿ ಈ ಜಟಿಲತೆ, ಸಂಕೀರ್ಣತೆ ಮತ್ತು ವ್ಶೆರುಧ್ಯಗಳು ಕನ್ನಡ ಸಂಸ್ಕ್ರತಿ, ಸಮಾಜ ಮತ್ತು ಸಾಹಿತ್ಯದ ಚಾರಿತ್ರಿಕ ವ್ಶೆರುಧ್ಯಗಳನ್ನು ಪ್ರತಿಫಲಿಸುವ ಕಥನಗಳಾಗಿವೆ.

NOTES:ವಿಲಿ0ುಂ ಮಾಕ್ ಕಮರ್ಾಕ ವಿಲಿ0ುಂ ಮಾಕ್ ಕಮರ್ಾಕರು ವಿಷ0ುದ ಬಗ್ಗೆ ತಮ್ಮ ಐಟಿರಚಿಥಿಚಿಣ ಚಿ ಚಿ ಖಜಛಿಣ (1663) ಎಂಬ ಲೇಖನದಲ್ಲಿ ಸಾಕಷ್ಟು ಒಳನೋಟಗಳನ್ನು ಒದಗಿಸಿದ್ದಾರೆ.
ವಾದವು ಅಂದಿನ ಮತ್ತು ಮುಂದಿನ ಪೀಳಿಗೆ0ುವರಿಗೆ ಬಲಿಷ್ಟವಾದ ತಾತ್ವಿಕ ಅಡಿಪಾ0ುವನ್ನು ಹಾಕಿ ಕೊಟ್ಟಿತು. ಈಗಲೂ ಅನೇಕರು ವಾದವನ್ನು ಪುಷ್ಟಿಕರಿಸುತ್ತಾರೆ.
ಬ್ರಾಹ್ಮಣ ಸಾಹಿತಿಗಳು ಬಸವಣ್ಣನ ಮತ್ತು ಇತರ ಶಿವ ಶರಣ ಬಗ್ಗೆ ಆಸಕ್ತಿ ವಹಿಸಿದುದು ಒಂದು ರೋಚಕ ಇತಿಹಾಸವನ್ನೆ ತೆರೆದಿಡುತ್ತದೆ. ಇದರೆ ಬಗ್ಗೆ ಸಾಕಷ್ಟು ಸಂಶೀದನೆ0ಾಗಬೇಕಾಗಿದೆ.
ಚಾರಿತ್ರಿಕ ವೈರುಧ್ಯವನ್ನು 1932ರಲ್ಲಿ0ೆು ಒರ್ವ ಮತಾಭಿಮಾನಿ ಎಂಬುವವರು ಮೈಸೂರ್ ಸ್ಟಾರ ಪ್ರತ್ರಿಕೆ0ುಲ್ಲಿ ವಚನಗಳನ್ನು ವಿಮಶರ್ಿಸುತ್ತಾ ಟೀಕಿಸಿದ್ದಾರೆ.
ಉದಾಹರಣೆ0ಾಗಿ ಕಲ್ಯಾಣಪ್ಪ ಬ್ಯಾಳಿ ಎಂಬುವವರು 1955 ರಲ್ಲಿ ಹೀಗೆ ಬರೆ0ುುತ್ತಾರೆ:
?
ಅನಾದಿ ವೀರಶೈವ ಸಂಗ್ರಹ? ದಲ್ಲಿ ಹೇಳಿರುವಂತೆ ಬಸವನು ಜಾತಿಯಿಂದ ಶುಧ್ದ ವೀರಶೈವ ವಂಶನಾದ ಪಂಚಮಸಾಲೆ0ುವನು? (1955:269). ಅವರು ಭಾವಿಸುವ ಹಾಗೆ ಬಸವಣ್ಣನು ಅಪ್ರಾಕ್ರತ ಅಥವಾ ಆರಾಧ್ಯ ಬ್ರಾಹ್ಮಣ ಅಥವಾ ಅತಿ ವಣರ್ಾಶ್ರಮಿ ಬ್ರಾಹ್ಮಣನು. ಆದರೆ ದುರಾದೃಷ್ಟವಶಾತ್ ?ಇದನ್ನರಿ0ುದ ವೈಷ್ಣವ ಕವಿ0ಾದ ಸಿಂಗಿರಾಜನೂ ಮತ್ತು ಶೈವ ಕವಿಗಳಾದ ಹರಿಹರ ಭೀಮಾದಿಗಳೂ ಬಸವನಿಗೆ ಪ್ರಾಕ್ರತ ಬ್ರಾಹ್ಮಣ್ಯವನ್ನಾರೋಪಮಾಡಲಿಕ್ಕೆ ಹೋಗಿ ದೊಡ್ಡ ಪೇಚಿನಲ್ಲಿ ಬಿದ್ದು ಬಿಟ್ಟಿದ್ದಾರೆ? (ಅದೇ). ಬ್ರಾಹ್ಮಣೀಕರಣದ ಅಂಶವನ್ನು ಮಾತೆ ಮಹಾದೇವಿ0ುವರು ಸಹ ಟೀಕಿಸಿದ್ದಾರೆ. ಇದರ ಬಗ್ಗೆ ಮತ್ತುಷ್ಟು ವಿವರಗಳಿಗಾಗಿ ಬಸವ ವಚನ ದೀಪ್ತಿ ವಿವಾದದ ಸಂಧರ್ಭವನ್ನು ಪರಿಶೀಲಿಸಿ.
ರು ವಿಷ0ುದ ಬಗ್ಗೆ ತಮ್ಮ ಐಟಿರಚಿಥಿಚಿಣ ಚಿ ಚಿ ಖಜಛಿಣ (1663) ಎಂಬ ಲೇಖನದಲ್ಲಿ ಸಾಕಷ್ಟು ಒಳನೋಟಗಳನ್ನು ಒದಗಿಸಿದ್ದಾರೆ.
ವಾದವು ಅಂದಿನ ಮತ್ತು ಮುಂದಿನ ಪೀಳಿಗೆ0ುವರಿಗೆ ಬಲಿಷ್ಟವಾದ ತಾತ್ವಿಕ ಅಡಿಪಾ0ುವನ್ನು ಹಾಕಿ ಕೊಟ್ಟಿತು. ಈಗಲೂ ಅನೇಕರು ವಾದವನ್ನು ಪುಷ್ಟಿಕರಿಸುತ್ತಾರೆ.
ಬ್ರಾಹ್ಮಣ ಸಾಹಿತಿಗಳು ಬಸವಣ್ಣನ ಮತ್ತು ಇತರ ಶಿವ ಶರಣ ಬಗ್ಗೆ ಆಸಕ್ತಿ ವಹಿಸಿದುದು ಒಂದು ರೋಚಕ ಇತಿಹಾಸವನ್ನೆ ತೆರೆದಿಡುತ್ತದೆ. ಇದರೆ ಬಗ್ಗೆ ಸಾಕಷ್ಟು ಸಂಶೀದನೆ0ಾಗಬೇಕಾಗಿದೆ.
ಚಾರಿತ್ರಿಕ ವೈರುಧ್ಯವನ್ನು 1932ರಲ್ಲಿ0ೆು ಒರ್ವ ಮತಾಭಿಮಾನಿ ಎಂಬುವವರು ಮೈಸೂರ್ ಸ್ಟಾರ ಪ್ರತ್ರಿಕೆ0ುಲ್ಲಿ ವಚನಗಳನ್ನು ವಿಮಶರ್ಿಸುತ್ತಾ ಟೀಕಿಸಿದ್ದಾರೆ.
ಉದಾಹರಣೆ0ಾಗಿ ಕಲ್ಯಾಣಪ್ಪ ಬ್ಯಾಳಿ ಎಂಬುವವರು 1955 ರಲ್ಲಿ ಹೀಗೆ ಬರೆ0ುುತ್ತಾರೆ:
?
ಅನಾದಿ ವೀರಶೈವ ಸಂಗ್ರಹ? ದಲ್ಲಿ ಹೇಳಿರುವಂತೆ ಬಸವನು ಜಾತಿಯಿಂದ ಶುಧ್ದ ವೀರಶೈವ ವಂಶನಾದ ಪಂಚಮಸಾಲೆ0ುವನು? (1955:269). ಅವರು ಭಾವಿಸುವ ಹಾಗೆ ಬಸವಣ್ಣನು ಅಪ್ರಾಕ್ರತ ಅಥವಾ ಆರಾಧ್ಯ ಬ್ರಾಹ್ಮಣ ಅಥವಾ ಅತಿ ವಣರ್ಾಶ್ರಮಿ ಬ್ರಾಹ್ಮಣನು. ಆದರೆ ದುರಾದೃಷ್ಟವಶಾತ್ ?ಇದನ್ನರಿ0ುದ ವೈಷ್ಣವ ಕವಿ0ಾದ ಸಿಂಗಿರಾಜನೂ ಮತ್ತು ಶೈವ ಕವಿಗಳಾದ ಹರಿಹರ ಭೀಮಾದಿಗಳೂ ಬಸವನಿಗೆ ಪ್ರಾಕ್ರತ ಬ್ರಾಹ್ಮಣ್ಯವನ್ನಾರೋಪಮಾಡಲಿಕ್ಕೆ ಹೋಗಿ ದೊಡ್ಡ ಪೇಚಿನಲ್ಲಿ ಬಿದ್ದು ಬಿಟ್ಟಿದ್ದಾರೆ? (ಅದೇ). ಬ್ರಾಹ್ಮಣೀಕರಣದ ಅಂಶವನ್ನು ಮಾತೆ ಮಹಾದೇವಿ0ುವರು ಸಹ ಟೀಕಿಸಿದ್ದಾರೆ. ಇದರ ಬಗ್ಗೆ ಮತ್ತುಷ್ಟು ವಿವರಗಳಿಗಾಗಿ ಬಸವ ವಚನ ದೀಪ್ತಿ ವಿವಾದದ ಸಂಧರ್ಭವನ್ನು ಪರಿಶೀಲಿಸಿ.

ಉಲ್ಲೇಖಗಳು:
) ಬ್ರ್ರೌನ್, ಸಿ.ಪಿ. ೧೮೭೧. “Essays on the Creed and Customs of the Jangams”, The Journal of the Royal Asiatic Society of Great Britain and Ireland, ಸಂ. V, ಲಂಡನ್.
)    ——— ೧೯೯೮ (೧೮೪೦).  “Essays on the Creed, Customs and Literature of the Jangams” in Selected Essays of C.P. Brown on Telugu Literature and Culture, ಸಂ. .ಎನ್. ರೆಡ್ಡಿ.
) ಬಸವಲಿಂಗಪ್ಪ, ಜೀರಿಗೆ ೧೯೩೩. “ಲಿಂಗಾಯತರು ಮತ್ತು ಆರಾಧ್ಯರುಶಿವಾನುಭವ ಸಂ. ಹಳಕಟ್ಟಿ, ಸಂ., ಸಂ..
) ಬುಕನಾನ್, ಫ್ರಾನ್ಸಿಸ್ ೧೯೮೮. A Journey from Madras Through Mysore, Canara and Malabar, ಸಂ. I, ಏಷಿಯನ್ ಏಜುಕೇಶನಲ್ ಸರ್ವಿಸಸ್.
) ಬ್ಯಾಳಿ, ಕಲ್ಯಾಣಪ್ಪ, ೧೯೫೫ಬಸವನ ಜಾತಿಯ ಬಗ್ಗೆ ಶೈವ ಕವಿಗಳ ಭ್ರಮೆ”, ಶಿವಾನುಭವ ಸಂ. ಹಳಕಟ್ಟಿ, ಸಂ. ೨೯, ಸಂ. .
) ಬೋರಟ್ಟಿ, ವಿಜಯಕುಮಾರ್ ಎಂ. ೨೦೦೫. Narratives and Communities: A Study of “Literary” Controversies, ಅಪ್ರಕಟಿತ ಪಿ.ಎಚ್. ಡಿ. ಹೈದಾರಬಾದ್ ವಿ.ವಿ. ಗೆ ಸಾದರಪಡಿಸಿದ್ದು.
) ಕಲಬುರ್ಗಿ, ಎಮ್.ಎಮ್. ೧೯೯೩ ಬಸವಣ್ಣನವರ ವಚನ ಸಂಪುಟ, ಬೆಂಗಳೂರು: ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ.
) ಕುಳ್ಳಿ, ಜಯವಂತ್. ೧೯೮೩. ತಮ್ಮನಪ್ಪನವರು ಚಿಕ್ಕೊಡಿ, ಗದಗ: ವೀರಶೈವ ಆಧ್ಯಯನ ಸಂಸ್ಥೆ
) ದೇವಿರಪ್ಪ, ಎಚ್. ೧೯೮೫. ಮೈಸೂರು ಬಸವಯ್ಯನವರು. ಚಿತ್ರದುರ್ಗ: ತರಳಬಾಳು.
೧೦) ಪಾವಟೆ, ಸಿದ್ದರಾಮಪ್ಪ. ೧೯೨೨. ಬಸವ ಬಾನು. ಹುಬ್ಬಳ್ಳಿ.
೧೧) ಮೂರ್ತಿ, ಚಿದಾನಂದ. ೨೦೦೦. ವೀರಶೈವ ಧರ್ಮ:ಭಾರತೀಯ ಸಂಸ್ಕ್ರತಿ (ಹಿಂದು: ಲಿಂಗಾಯತ), ಬೆಂಗಳೂರ್: ಮಿಂಚು.
೧೨) ಜೇಮ್ಸ್, ಮ್ಯಾನರ್. ೧೯೭೭. Politidal Change in An Indian State: Mysore (1917-1955), ನ್ಯೂ ದೆಲ್ಲಿ: ಮನೊಹರ್.
೧೩) ತಿಮ್ಮಯ್ಯ, ಜಿ. ೧೯೯೩. Power, Politics and Social Justice: Backwards Caste Movement in Karnataka, ದೆಲ್ಲಿ: ಸ್ಭೆಜ್.
೧೪) ಚಾರ್ಲ್ಸ್ ವರ್ತ, ನೀಲ್. ೧೯೮೫. Peasants and Imperial Rule: Agriculture and Agrarian Society in the Bombay Presidency: (1850-1935), ಕೆಂಬ್ರಿಡ್ಜ್ ಯೂನಿವರ್ಸಿಟ್ ಪ್ರೆಸ್ ಮತ್ತು ಓರಿಯಂಟ್ ಲಾಂಗಮನ್
೧೫) ಶೌಟೆನ್, ಜೆ.ಪಿ. ೧೯೯೧. Revolution of the Mystics: On the Social Aspects of Virashaivism, ದಿ ನೆದರ್ ಲ್ಯಾಂಡ್ಸ್: ಕೊಕ್ ಪ್ರೊಸ್.
೧೬) ಮಾರ್ಕ ಕರ್ಮಾಕ, ವಿಲಿಯ್ಂ. ೧೯೬೩. “Lingayaths as Sect”, The Journal of the Royal Anthropological Institute of Great Britain and Ireland, ಸಂ. ೯೩, ಸಂ. (.-ಜೂ.).
೧೭) ನಂಜುಡಾರಾಧ್ಯರು, ಎಮ್. ಜಿ. “ಶಿರಸಿ ಗುರುಸಿದ್ದಶಾಸ್ತ್ರಿಗಳು”, ವೀರಶೈವ ಪುಣ್ಯ ಪುರುಷರು ಮಾಲೆ, ಸಂ. ಬಸವರಾಜ ಮಲ್ಲಶೆಟ್ಟಿ, ಸಂ. , ಗದಗ: ವೀರಶೈವ ಅಧ್ಯಯನ ಸಂಸ್ಥೆ.
೧೮) ರಾಜಶೇಖರಪ್ಪ, ಬಿ. ೨೦೦೭. “ಬಸವಣ್ಣನವರ ಜಾತಿಮೂಲ: ಕೇವಲ ಕಾಲ್ಪನಿಕ ವಾದಎನ್ನ ತಂದೆ ಕೂಡಲಸಂಗಮದೇವಾ ದಿಂದ, ಬಸವ ಪಥ, ವಿಶೇಷ ಸಂಚಿಕೆ.
೧೯) ರೆವೆರೆಂಡ್ ಜಿ. ವುರ್ಥ, ೧೯೬೯ (೧೮೬೫) “The Basava Purana of the Lingaits”, translated by the Rev. G. Wurth and Communicated by W.E. Frerr, 13th July 1865 in Journal of the Bombay Branch of the Royal Asiatic Society ಸಂ. ೨೪, ಸಂ.
೨೦) ವೀರಪ್ಪ, ಬಿ.ಸಿ. ೨೦೦೧. ಬೆಂಗಳೂರು ನಗರದ ವೀರಶೈವ ಮಠಗಳು: ಒಂದು ಸಾಂಸ್ಕ್ರತಿಕ ಅಧ್ಯಯನ, ಬೆಂಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್.
೨೧) ಹಾಲಪ್ಪ, ಜಿ.ಎಸ್. ೧೯೬೬. “ಶ್ರೀ ಬಸವ ಚರಿತ್ರೆ”, ರಾಷ್ಟ್ರದ್ರಷ್ಟಾರ ಹರ್ಡೆಕರ್ ಮಂಜಪ್ಪ ದಿಂದ, ಸಂ. ಜಿ.ಎಸ್. ಹಾಲಪ್ಪ, ಧಾರವಾಡ: ಹರ್ಡೆಕರ್ ಮಂಜಪ್ಪ ಸ್ಮಾರಕ Uಂಥ ಮಾಲೆ.

*****

Advertisements
Published in: on ಮಾರ್ಚ್ 4, 2010 at 6:33 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

The URI to TrackBack this entry is: https://basavanna.wordpress.com/2010/03/04/%e0%b2%ac%e0%b2%b8%e0%b2%b5%e0%b2%a3%e0%b3%8d%e0%b2%a3%e0%b2%a8-%e0%b2%b9%e0%b3%81%e0%b2%9f%e0%b3%8d%e0%b2%9f%e0%b2%bf%e0%b2%a8-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%9c%e0%b2%be/trackback/

RSS feed for comments on this post.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: